ನವದೆಹಲಿ: 2017ರಲ್ಲಿ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಪ್ರಕರಣದ ಆರೋಪಿ ಮೋಹನ್ ಎನ್ ನಾಯಕ್ ಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಆ.22) ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠದ ಜಸ್ಟೀಸ್ ಬೇಲಾ ಎಂ ತ್ರಿವೇದಿ ಮತ್ತು ಜಸ್ಟೀಸ್ ಸತೀಶ್ ಚಂದ್ರ ಶರ್ಮಾ , ಮೋಹನ್ ನಾಯಕ್ ಗೆ ನೀಡಿದ್ದ ಜಾಮೀನು ರದ್ದುಗೊಳಿಸಲು ನಿರಾಕರಿಸಿದ್ದು, ವಿಚಾರಣೆಗೆ ನಾಯಕ್ ಸಹಕರಿಸುತ್ತಿದ್ದು, ಈವರೆಗೂ ಯಾವುದೇ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡಿಲ್ಲ. ನಾಯಕ್ 2018ರ ಜುಲೈ 18ರಿಂದ ಬಂಧನದಲ್ಲಿರುವುದಾಗಿ ತಿಳಿಸಿದೆ.
ಈ ಹಂತದಲ್ಲಿ ನಾವು ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಪೀಠ ತಿಳಿಸಿದ್ದು, ಏತನ್ಮಧ್ಯೆ ವಿಚಾರಣಾ ಕೋರ್ಟ್ ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ, ಮುಕ್ತಾಯಗೊಳಿಸಬೇಕು. ಅಲ್ಲದೇ ವಿಚಾರಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

