ಬೆಂಗಳೂರು : ಧರ್ಮಸ್ಥಳ ಅತಿ ಕೆಟ್ಟ ಸ್ಥಳವಾಗಿದೆ. ಸರ್ಕಾರ ಅಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದೆ ಸುಭಾಷಿಣಿ ಅಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಬಳ್ಳಾರಿ ಮುಗಿಸದ್ದೇವೆ. ಹಾಸನ ಮುಗಿಸಿದ್ದೇವೆ. ಮುಂದೆ ಧರ್ಮಸ್ಥಳವನ್ನೂ ಸಹ ಮುಗಿಸುತ್ತೇವೆ ಎಂದು ನುಡಿದಿದ್ದಾರೆ.

ಧರ್ಮಸ್ಥಳದಲ್ಲಿ ಮನುವಾದ ವ್ಯವಸ್ಥೆ ಇದೆ. ಮನುವಾದವನ್ನು ಭಾರತದಿಂದ ಓಡಿಸಬೇಕಿದೆ. ಧರ್ಮಸ್ಥಳದಲ್ಲಿ ಹಣ ಬಲ, ತೋಳ್ಬಲ, ಜನ ಬಲ ಬಳಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ದಲಿತರನ್ನು ತುಳಿದು, ಅವರ ಜಮೀನು ಕಬಳಿಕೆ ಮಾಡಲಾಗುತ್ತಿದೆ. ಯಾರಾದರೂ ತಿರುಗಿಬಿದ್ದರೆ ಅವರನ್ನು ಮುಗಿಸುವ ಕೆಲಸ ಮಾಡುತ್ತಾರೆ. ಆದ್ರೆ ಅಲ್ಲಿನ ದಲಿತರ ಪರವಾಗಿ ಎಡಪಂಥೀಯ ಸಂಘಟನೆಗಳು ಹೋರಾಟಕ್ಕೆ ನಿಂತು ನ್ಯಾಯ ಕೊಡಿಸುತ್ತಿವೆ ಎಂದು ಸುಭಾಷಿನಿ ಅಲಿ ಹೇಳಿದ್ದಾರೆ.

ಪದ್ಮಲತ ಎನ್ನುವ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ವೇದವಲ್ಲಿಗೆ ಅನ್ಯಾಯ ಆಗಿದೆ. ಸೌಜನ್ಯಗೆ ಈಗ ಅನ್ಯಾಯ ಆಗಿದೆ. ಧರ್ಮಸ್ಥಳದಲ್ಲಿ ಈಗ ಅಧರ್ಮ ಈಗ ನಡೆಯುವುದಿಲ್ಲ ಎಂದಿರುವ ಅವರು, ಧರ್ಮಸ್ಥಳದಲ್ಲಿ ನಡೆದಿರೋದು 50- 60 ವರ್ಷಗಳ ಹಿಂದಿನ ಕಥೆಯಲ್ಲ. ಈಗಿನ ಕಥೆ. ಹೀಗಾಗಿ ಇದರ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಸುಭಾಷಿಣಿ ಅಲಿ ಹೇಳಿದ್ದಾರೆ.

ಧರ್ಮಸ್ಥಳದವರು ಲಕ್ಷಾಂತರ ರೂ. ಹಣ, ಒಡವೆ ಸಂಗ್ರಹ ಮಾಡುತ್ತಿದ್ದಾರೆ. ಈಗಿನ ಕೇಂದ್ರ ಸರ್ಕಾರ ಕೂಡ ಇಂತವರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ. ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಮಾಡಿರೋದನ್ನ ಯಾರೂ ಮರೆಯಬಾರದು. ಇದೆಲ್ಲವೂ ಮನುವಾದಕ್ಕಾಗಿ ಮಾಡಿರುವ ಹತ್ಯೆ‌ ಎಂದು ಆರೋಪಿಸಿದ ಸುಭಾಷಿಣಿ ಅಲಿ, ಮಹಿಳೆಯರು ಹತ್ಯೆಗೊಳಗಾಗ್ತಿದ್ದಾರೆ. ಆದರೆ ಹೇಗೆ ಸಾವನ್ನಪ್ಪಿದ್ದರು ಎಂಬುದೇ ಗೊತ್ತಾಗುವುದಿಲ್ಲ. ಇಂಥಾ ಕೃತ್ಯ ಮಾಡುವ ಅಪರಾಧಿಗಳನ್ನ ಹಾಗೆಯೇ ಬಿಡಬಾರದು ಇಂತವರ ವಿರುದ್ಧ ಹೋರಾಟ ಮಾಡಿ ನ್ಯಾಯ ಪಡೆಯಬೇಕಿದೆ ಎಂದು ಕರೆ ನೀಡಿದರು.

ಧರ್ಮಸ್ಥಳದಲ್ಲಿ ಶವಗಳು  ಪತ್ತೆಯಾಗಿದೆ. ಪೊಲೀಸ್ ಹಾಗೂ ಸರ್ಕಾರಕ್ಕೆ ಅನೇಕ ಹತ್ಯೆಗಳಾಗ್ತಿರೋದು ಹಾಗೂ ನಾಪತ್ತೆಯಾಗುತ್ತಿರುವ ಪ್ರಕರಣ ಗೊತ್ತಿದೆ. ಆದರೂ ಸಹ  ಏನೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ. ಧರ್ಮಸ್ಥಳ ಅತಿ ಕೆಟ್ಟ ಪ್ರದೇಶವಾಗಿದ್ದು, ರಾಜ್ಯ ಸರ್ಕಾರ ಧರ್ಮಸ್ಥಳವನ್ನ  ರೆಡ್ ಅಲರ್ಟ್ ಅಂತ ಘೋಷಣೆ ಮಾಡಬೇಕು ಎಂದರು.