ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್ವರ್ಕ್‌ ಕ್ಷೇತ್ರ ಅಭಿವೃಧ್ಧಿಯಾಗಬೇಕು ಮತ್ತು ಅವರಿಗಾಗಿ ಸರ್ಕಾರವು ಒಂದು ನಿಗದಿತ ದಿನವನ್ನು ಮೀಸಲಿಡಬೇಕು ಎಂದು ಡಾ. ಶರತ್‌ ಕುಮಾರ್‌ ಪಿ. ಎನ್‌ ಹೇಳಿದರು.

ನಗರದ ಶಿಕ್ಷಕರ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರದಾದ್ಯಂತ 500ಕ್ಕೂ ಹೆಚ್ಚು ನೆಟ್‌ವರ್ಕ್‌ ಮಾರ್ಕೆಟಿಂಗ್‌ ವೃತ್ತಿಪರರನ್ನು ಒಂದೆಡೆ ಸೇರಿಸಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಕ್ಷೇತ್ರಗಳಿಗೂ ಪ್ರತ್ಯೇಕ ದಿನವನ್ನು ಮೀಸಲಿಡಲಾಗಿದೆ, ಅದೇ ರೀತಿ ನೆಟ್‌ವರ್ಕ್‌ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೂ ಮನ್ನಣೆ ಸಿಗಬೇಕು ಮತ್ತು ಅವರಿಗಾಗಿ ಒಂದು ದಿನವನ್ನು ಮೀಸಲಿಡಬೇಕು ಎಂಬ ಉದ್ದೇಶದಿಂದ ಡಿಸೆಂಬರ್‌ 23ರಂದು ನೆಟ್ವರ್ಕರ್ಸ್‌ ದಿನವನ್ನು ಆಚರಿಸಬೇಕು. ಅದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.

ನೆಟ್‌ವರ್ಕ್ ಮಾರ್ಕೆಟಿಂಗ್ ಕೇವಲ ಮಾರಾಟ ಕ್ಷೇತ್ರವಲ್ಲ, ಇಲ್ಲಿ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ನೈತಿಕ ಅಭ್ಯಾಸಗಳ ಬೆಳವಣಿಗೆಯನ್ನು ಉತ್ತೇಜಿಸುವುದಾಗಿರುತ್ತದೆ. ನಾವು ಜಿಎಸ್‌ಟಿ ಮತ್ತು ತೆರಿಗೆಗಳನ್ನು ಪಾವತಿಸುತ್ತೇವೆ. ಈ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ. ಹೀಗಾಗಿ ಸರ್ಕಾರವು ನಮ್ಮ ಪ್ರಯತ್ನಗಳನ್ನು ಗುರುತಿಸುವಂತಾಗಬೇಕು ಮತ್ತು ನಿಜವಾದ ನೆಟ್‌ವರ್ಕ್ ಮಾರ್ಕೆಟಿಂಗ್ ಅನ್ನು ಉತ್ತೇಜಿಸುವುದರ ಜೊತೆಗೆ ಕಾನೂನುಬಾಹಿರ ಅಭ್ಯಾಸಗಳ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು ಎಂದು ತಿಳಿಸಿದರು.

ಡಿಸೆಂಬರ್‌ 23ರಂದು ರೈತರ ದಿನವಾಗಿದ್ದು, ನಾವಿಂದು ರೈತರ ದಿನವನ್ನೇ ಮರೆಯುವ ಪರಿಸ್ಥಿತಿಗೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ರೈತರ ದಿನವನ್ನು ಮರೆಯಬಾರದು ಜೊತೆಗೆ ರೈತರ ದಿನದಂದೇ ನೆಟ್‌ವರ್ಕ್‌ ಮಾರ್ಕೆಟಿಂಗ್‌ ವೃತ್ತಿಪರರ ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ಅನ್ಯಾಯದ ವಿರುದ್ಧ ಹೋರಾಡಲು ಮತ್ತು ನಮ್ಮ ವೃತ್ತಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಾವು ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ವಕೀಲರಾದ ಹರ್ಷ ಮುತಾಲಿಕ್‌ ಮಾತನಾಡಿ, ನೆಟ್‌ವರ್ಕ್‌ ಕ್ಷೇತ್ರದಲ್ಲಿ ಮಾರ್ಕೆಟಿಂಗ್‌ ವೃತ್ತಿಪರರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಹಾಗಾದಾಗ ಅವರ ಹಿತಾಸಕ್ತಿಗಳನ್ನು ಸರ್ಕಾರಕ್ಕೆ ತಲುಪಿಸಲು ಸಾಧ್ಯ. ಕಾನೂನು ಪಾಲನೆಯೊಂದಿಗೆ ನೈತಿಕ ಮಾರ್ಗದಲ್ಲಿ ನೆಟ್‌ವರ್ಕ್‌ ಕ್ಷೇತ್ರ ಅಭಿವೃದ್ಧಿ ಕಾಣಬೇಕು ಮತ್ತು ಅದಕ್ಕಾಗಿ ಡಿಸೆಂಬರ್‌ 23 ಅಧಿಕೃತವಾಗಿ ಘೋಷಣೆಯಾಗಬೇಕು. ಅಲ್ಲದೆ ಹಿಮಾಚಲ ಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ನೆಟ್‌ವರ್ಕಿಂಗ್‌ನಲ್ಲಿ ಮೀಸಲಾದ ಕೋರ್ಸ್ ಅನ್ನು ನೀಡಲಾಗುತ್ತಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಪರಿಚಯಿಸುವ ಅವಶ್ಯಕತೆಯಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಮುನ್ನೋತ್ ಮಾತನಾಡಿ, ಈ ಕಾರ್ಯಕ್ರಮವು ನೆಟ್‌ವರ್ಕ್ ಮಾರ್ಕೆಟಿಂಗ್‌ ವೃತ್ತಿಪರರನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನವಾಗಿದೆ. ಈ ಮೂಲಕ ಅನೈತಿಕ ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ಅನುಕೂಲಕರ ಉತ್ಪನ್ನಗಳ ನೇರ ಮಾರಾಟಕ್ಕೆ ದಾರಿ ಒದಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯಾಗಲಿದೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಅನೇಕ ಮಾರ್ಕೆಟಿಂಗ್‌ ವೃತ್ತಿಪರರು ರಕ್ತದಾನಕ್ಕೆ ಮುಂದಾಗಿದ್ದು ವಿಶೇಷವಾಗಿ ಕಂಡುಬಂದಿತು.