ಬೆಂಗಳೂರು: ನಾಳೆ ನಾಡಿನಾದ್ಯಂತ ಮಹಿಳೆಯರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬ ಮಾಡುತ್ತಾರೆ. ವರಮಹಾಲಕ್ಷ್ಮಿ ಹಬ್ಬದ ಖುಷಿಯಲ್ಲಿದ್ದ ಮಹಿಳೆಯರು ಕಂಗಾಲಾಗಿದ್ದಾರೆ. ಚಿನ್ನ ಕೊಡ್ತೀನಿ ಎಂದು ಹಣ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ.

ಆನಂದ್ ಜ್ಯುವೆಲರ್ಸ್ ಅಂಡ್​ ಕೇಸರ್ ಬ್ಯಾಂಕರ್ಸ್ ಮಾಲೀಕರು ಮಹಿಳೆಯರು ಅಡವಿಟ್ಟ ಚಿನ್ನದ ಜೊತೆ ಮನೆ ಖಾಲಿ‌ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಈ ಚೀಟಿ ಕಟ್ಟಿದ್ದರು. ಇದೀಗ ಆ ಎಲ್ಲ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ಮುನಾರಾಮ್ ಎಂಬ ರಾಜಸ್ಥಾನಿ‌ ಮೂಲದ ವ್ಯಕ್ತಿ ಆಭರಣದ ಅಂಗಡಿ ಇಟ್ಟುಕೊಂಡಿದ್ದ. ಮಾಹಿತಿಗಳ ಪ್ರಕಾರ ಚಿನ್ನದ ಅಂಗಡಿ ಮಾಲೀಕ ಸುಮಾರು ಹತ್ತು ವರ್ಷಕ್ಕೂ ಹೆಚ್ಚು ದಿನದಿಂದ ಅಲ್ಲೇ ವಾಸವಾಗಿದ್ದ ಎನ್ನಲಾಗಿದೆ.

50ಕ್ಕೂ ಹೆಚ್ಚು ಜನರಿಂದ ಚೀಟಿ ಹಾಕಿಸಿಕೊಂಡು ಚಿನ್ನ ಅಡಮಾನ ಇಟ್ಕೊಂಡಿದ್ದ. ವರಮಹಾಲಕ್ಷ್ಮಿ ಹಬ್ಬ ಅಂತ ಚೀಟಿ ಹಾಕಿದ್ದವರು ಚಿನ್ನ ಬಿಡಿಸಿಕೊಂಡು ಬರಲು ಹೋದಾಗ ವಂಚನೆ ಬೆಳಕಿಗೆ ಬಂದಿದೆ. ಆತಂಕಕ್ಕೆ ಒಳಗಾಗಿ ಮಹಿಳೆಯರು ಠಾಣೆಗೆ ಬಂದ ಜನ ಕಣ್ಣೀರು ಇಡುತ್ತಿದ್ದಾರೆ. ಇತ್ತ ಹಬ್ಬವೂ ಇಲ್ಲ, ಹಣವೂ ಇಲ್ಲ, ಹಣ ಕಟ್ಟಿಸಿಕೊಂಡವನೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಂಚನೆ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.