ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಸರ್ಕಾರ ನನ್ನ ಸಂಪೂರ್ಣ ವಾಕ್‌ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತೀವ್ರವಾಗಿ ಕಿರಿಕಾರಿದ್ದಾರೆ.

ಈ ಮೊದಲು ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರ ಇದೀಗ ಸಾಮಾಜಿಕ ಜಾಲತಾಣವನ್ನೂ  ಬಳಸದಂತೆ ನಿರ್ಬಂಧ ಹೇರಿರುವುದಕ್ಕೆ ತೀವ್ರವಾಗಿ ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿರುವ ಅವರು, ಕರ್ನಾಟಕ ಸರ್ಕಾರ ನನ್ನ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಿತ್ತು ಕೊಂಡಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ವಿರುದ್ಧ ಮಾತಾಡಬಾರದು ಎಂದು ಮೊನ್ನೆ ನನ್ನ ವಿರುದ್ಧ ನಿರ್ಬಂಧ ಹೇರಲಾಗಿತ್ತು. ಈಗ ಮುಂದುವರಿದು ಪುನೀತ್ ಕೆರೆಹಳ್ಳಿ ಯಾವುದೇ ರೀತಿಯ ಸಾಮಾಜಿಕ ಮಾಧ್ಯಮ ಬಳಸಬಾರದು ಎಂದು ಕರ್ನಾಟಕ ಕಾನೂನು ಜಾರಿ ನಿರ್ಬಂಧ ಹೇರಿದೆ. ನಾನು ತಪ್ಪು ಮಾಡಿದ್ದರೆ ಮೊದಲು ನ್ಯಾಯಾಲಯದಲ್ಲಿ ಅದನ್ನು ರುಜುವಾತು ಮಾಡಲಿ.

ನಂತರ ನನ್ನ ಮೇಲೆ ನಿರ್ಬಂಧ ಹೇರಲಿ. ಅದು ಬಿಟ್ಟು ಈ ರೀತಿ ಕಾನೂನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ಮೇಲೆ ನಿರ್ಬಂಧ ಹೇರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.