ಬೆಂಗಳೂರು: ಮದ್ದೂರು ಗಲಭೆ ಘಟನೆಗೆ ಸಂಬಂಧಿಸಿ ಸತ್ಯ ಸಂಶೋಧನಾ ತಂಡವನ್ನು ನಾವು ಈಗಾಗಲೇ ಪ್ರಕಟಿಸಿದ್ದೇವೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದೇವೆ. ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಲು ತಿಳಿಸಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ಇದೆ. ಇವರು ನಿಜಾಮರ ಆಡಳಿತವನ್ನು ನೆನಪು ಮಾಡಿ ಕೊಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳು, ಗೃಹ ಸಚಿವರು ತಮ್ಮ ಧೋರಣೆ ಸರಿಪಡಿಸಿಕೊಳ್ಳದಿದ್ದರೆ ಖಂಡಿತವಾಗಿ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡಲಿದೆ. ಇದಕ್ಕೆ ರಾಜ್ಯ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಗಣಪತಿ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ಡ್ಯಾನ್ಸ್ ಮಾಡಿದ ಪಿಎಸ್ಐ ಒಬ್ಬರನ್ನು ಅಮಾನತು ಮಾಡುವ ಮಾಹಿತಿ ನನಗೆ ಬಂದಿದೆ. ನಾವೇನು ಪಾಕಿಸ್ತಾನದಲ್ಲಿದ್ದೇವಾ? ಎಂದು ಕೇಳಿದರು.
ನಮ್ಮ ರಾಜ್ಯದಲ್ಲಿ ಆರೆಸ್ಸೆಸ್, ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತರನ್ನು ತಡೆಯಲು ಇವರು ಯಾರು? ಚಾಮುಂಡಿ ಬೆಟ್ಟಕ್ಕೆ, ಧರ್ಮಸ್ಥಳಕ್ಕೆ ಅಥವಾ ಗಣಪತಿ ಮೆರವಣಿಗೆಯಲ್ಲಿ ಹೋಗುವುದಾರೆ ಇವರು ಯಾರು ತಡೆಯುವುದಕ್ಕೆ ಎಂದು ಕೇಳಿದರು. ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ತಾಕತ್ತಿದ್ದರೆ ಒದ್ದು ಒಳಗಡೆ ಹಾಕಲಿ ಎಂದು ಸವಾಲೆಸೆದರು. ಅದನ್ನು ಮಾಡಲು ಈ ಸರಕಾರಕ್ಕೆ ಯೋಗ್ಯತೆ ಇಲ್ಲ. ಇವರು ಹಾಗಿದ್ದರೆ ನಮ್ಮನ್ನು ಪ್ರಶ್ನಿಸುತ್ತಾರಾ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮಧು ಬಂಗಾರಪ್ಪ ಇರುವ ಇಲಾಖೆಯನ್ನು ನೆಟ್ಟಗೆ ನೋಡಿಕೊಳ್ಳಲಿ. ಇರುವ ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿದೆ. ಅವರೇನು ಇದರ ಬಗ್ಗೆ ಮಾತನಾಡುವುದು ಎಂದು ಪತ್ರಕರ್ತರ ಪ್ರಶ್ನೆಗೆ ಬಿ.ವೈ. ವಿಜಯೇಂದ್ರ ಅವರು ಮರು ಪ್ರಶ್ನೆ ಹಾಕಿದರು.

