ಬೆಂಗಳೂರು: ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳಿಗೆ ಸೆ.6 ಗೌರಿ ಹಬ್ಬದಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಯನ್ನು ಎದುರುನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ.
ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಈಗಾಗಲೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೇನೆ ಎಂದು ವಿವರಿಸಿದರು. ಈ ಯೋಜನೆ ಮೂಲಕ ನೀರನ್ನು ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿವೆ.
ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟೆಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್‌ಗಳು ನೀರನ್ನು ಎತ್ತುತ್ತಿವೆ ಎಂದು ಮಾಹಿತಿ ನೀಡಿದರು. ಜನ ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಜಾಗ ಕಿರಿದಾಗಿರುವ ಕಡೆ ಪೊಲೀಸರಿಗೆ ಹೇಳಿ ಜನರು ನೀರು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಿದ್ದೇವೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೂ ಆಹ್ವಾನ ನೀಡುವಂತೆ ನನ್ನ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಪವಿತ್ರ ಕಾರ್ಯಕ್ಕೆ ಎಲ್ಲರೂ ಸಾಕ್ಷಿಯಾಗಬೇಕು ಎಂದು ಡಿಕೆಶಿ ಕರೆ ನೀಡಿದರು.

