ಬೆಂಗಳೂರು: ಆಟವಾಡುತ್ತಿದ್ದ 4 ವರ್ಷದ ಬಾಲಕ ಇದ್ದಕ್ಕಿದ್ದಂತೆ ನಮ್ಮ ಮೆಟ್ರೋ ಹಳಿಗೆ ಜಿಗಿದಿರುವ ಘಟನೆ ನೇರಳೆ ಮಾರ್ಗದಲ್ಲಿರುವ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಗುರುವಾರ ರಾತ್ರಿ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಕೂಡಲೇ ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಮಗು ಬಿದ್ದ ಕೂಡಲೇ ಮೆಟ್ರೋ ಟ್ರ್ಯಾಕ್ನ ವಿದ್ಯುತ್ ಸಂಚಾರವನ್ನು ಸ್ಥಗಿತಗೊಳಿಸಿ ರಕ್ಷಣೆ ಮಾಡಲಾಗಿತ್ತು. ಮಗುವಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು, ಯಾವುದೇ ಸಮಸ್ಯೆಯಾಗಿಲ್ಲ. ಮೆಟ್ರೋ ಸಿಬ್ಬಂದಿ ಜೊತೆಗೆ ಮಗುವನ್ನು ಸ್ಥಳೀಯ ಆಸ್ಪತ್ರೆ ಕಳುಹಿಸಲಾಗಿದೆ.
ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಪರಿಣಾಮ 8 ನಿಮಿಷ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ರಾತ್ರಿ 9 ಗಂಟೆ 8 ನಿಮಿಷದಿಂದ 9 ಗಂಟೆ 16 ನಿಮಿಷದ ವರೆಗೆ ಮೆಟ್ರೋ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ 2 ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಗಿದೆ.

