ಬೆಂಗಳೂರು: ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಅಪಘಾತ ಎಸಗಿ ಲಾರಿ ಚಾಲಕ ಪರಾರಿಯಾಗಿದ್ದನು. ಆರೋಪಿಯನ್ನ ತಡಕಾಡಿದ ಪೊಲೀಸರಿಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರನಲ್ಲಿ ಸಿಕ್ಕಿದ್ದಾನೆ.

ಹಿಟ್ ಆ್ಯಂಡ್ ರನ್ ಕೇಸ್​​​ನಲ್ಲಿ ಅಪಘಾತ ಎಸಗಿದ ಆರೋಪದಲ್ಲಿ ‌ಲಾರಿ ಚಾಲಕನ ಬಂಧನ ಆಗಿದೆ. ಬಂಧಿತ ಆರೋಪಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ‌ ಗ್ರಾಮದ ಮಧುಕರ ಸೋಮವಂಶಿ. ಜನವರಿ 14 ರಂದು ಬೆಳಗಿನ ಜಾವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ತಾಗಿಸಿ ಲಾರಿ ಚಾಲಕ ಪರಾರಿಯಾಗಿದ್ದನು.

ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರಿನ ಅಂಬಡಗಟ್ಟಿ ಬಳಿ ಈ ಅಪಘಾತ ನಡೆದಿತ್ತು. ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯ ಸಹ ಆಗಿತ್ತು. ಕಿತ್ತೂರು ಠಾಣೆಯಲ್ಲಿ ಸಚಿವೆಯ ಕಾರು ಚಾಲಕ ಶಿವಪ್ರಸಾದ್, ದೂರು ದಾಖಲಿಸಿದ್ದ.

ಈ ದೂರಿನ ಅನ್ವಯ ಪ್ರಕರಣದ ವಿಚಾರಣೆ ನಡೆಸಿದ್ದ ಕಿತ್ತೂರು ‌ಠಾಣೆ ಪೊಲೀಸರು, ಹಿರೇಬಾಗೇವಾಡಿ ಟೋಲ್ ಬಳಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಒಟ್ಟು 69 ಲಾರಿ ಚಾಲಕರನ್ನ ಪೊಲೀಸರು ವಿಚಾರಣೆ ನಡೆಸಿದರು. ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಪುಣೆ ಮೂಲದ ಚಾಲಕ ಮಧುಕರ ಸೋಮವಂಶಿಯ ಫೋನ್ ಕಾಲ್ ಡಿಟೇಲ್ಸ್​​ ಆಧರಿಸಿ ಬಂಧನ ಮಾಡಲಾಗಿದೆ.

ಅಪಘಾತ ಮಾಡಿದ್ದ ವಾಹನದ ಬಣ್ಣ ಎಫ್ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಆ ವರದಿಯಲ್ಲೂ ಅಪಘಾತ ನಡೆಸಿದ್ದು ಖಚಿತವಾಗಿದೆ. ಕಿತ್ತೂರು ಠಾಣೆ ಪೊಲೀಸರು ಆಕ್ಸಿಡೆಂಟ್​​​ ಮಾಡಿದ ಲಾರಿ ಜಪ್ತಿ ಮಾಡಿದ್ದಾರೆ. ಒಟ್ಟಾರೆ, 3 ತಿಂಗಳ ನಂತರ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.