ಬೆಂಗಳೂರು: ರೋಗಿಯೊಬ್ಬರನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಹಾಗೂ ಕ್ಯಾಂಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಭೀಕರ ಘಟನೆ ನೆಲಮಂಗಲ ತಾಲೂಕಿನ ಕುಣಿಗಲ್ ಬೈಪಾಸ್ ಬಳಿ ನಡೆದಿದೆ.
ಹಾಸನ ಕಡೆಯಿಂದ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ರೋಗಿಯನ್ನು ಕರೆದುಕೊಂಡು ವೇಗವಾಗಿ ತೆರಳುತ್ತಿದ್ದ ಈ ಆ್ಯಂಬುಲೆನ್ಸ್ ಮಾರ್ಗಮಧ್ಯೆ ಕ್ಯಾಂಟರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರತೆಗೆ ಹೋಲಿಸಿದರೆ ಅದೃಷ್ಟವಶಾತ್ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ, ಚಾಲಕ ಸೇರಿದಂತೆ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣವೇ ಎಚ್ಚೆತ್ತ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಕ್ಷಣಮಾತ್ರದಲ್ಲಿ ನೆರವಿಗೆ ಧಾವಿಸಿದ್ದಾರೆ. ಅಪಘಾತಕ್ಕೊಳಗಾದ ಆ್ಯಂಬುಲೆನ್ಸ್‌ನಲ್ಲಿ ಸಿಲುಕಿದ್ದ ರೋಗಿಯನ್ನು ಅತ್ಯಂತ ಸುರಕ್ಷಿತವಾಗಿ ಹೊರಗೆ ತೆಗೆದು, ತಕ್ಷಣವೇ ಬೇರೆ ವಾಹನದ ಮೂಲಕ ಬೆಂಗಳೂರಿಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಭೀಕರ ಅಪಘಾತದ ತೀವ್ರತೆಗೆ ರೋಗಿ ಬರುತ್ತಿದ್ದ ಆ್ಯಂಬುಲೆನ್ಸ್‌ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಜಖಂ ಆಗಿದೆ. ಇನ್ನು ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ವಾಹನಕ್ಕೂ ಅಲ್ಪ ಪ್ರಮಾಣದ ಹಾನಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

