ಬೆಂಗಳೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನಿ ನಿನ್ನೆ ಜಮ್ಮು ಏರ್​ಪೋರ್ಟ್ ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಭದ್ರತೆ ಒದಗಿಸಲಾಗಿದೆ.

ಏರ್​ಪೋರ್ಟ್​ಗೆ ಭದ್ರತಾ ಪಡೆ CISF ಸಿಬ್ಬಂದಿಯಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಯೋಧರು ಶಸ್ತ್ರಸಜ್ಜಿತವಾಗಿ ರೌಂಡ್ಸ್ ಹಾಕುತ್ತಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಇನ್ಮುಂದೆ ವಿಮಾನ ಹೊರಡುವ ಕನಿಷ್ಠ ಮೂರು ಗಂಟೆ ಮುಂಚೆ ನಿಲ್ದಾಣದಲ್ಲಿ ಹಾಜರಾಗಬೇಕು ಎಂದು ಮನವಿ ಮಾಡಲಾಗಿದೆ.

ದೇಶದೆಲ್ಲೆಡೆ ಭದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಹೆಚ್ಚಿಸಲಾಗಿದೆ. ಪ್ರಯಾಣಕ್ಕೂ ಮುನ್ನ ಸುಗಮ ಚೆಕ್​ಇನ್​, ಭದ್ರತೆ ಮತ್ತು ಸರಾಗ ಬೋರ್ಡಿಂಗ್​ಗಾಗಿ ಕನಿಷ್ಠ ಮೂರು ಗಂಟೆ ಮುನ್ನ ವಿಮಾನ ನಿಲ್ದಾಣ ತಲುಪುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.