ಬೆಂಗಳೂರು: ನಟ ದರ್ಶನ್ ಅವರು ಸಿಗರೇಟ್ ಸೇದುತ್ತ ಕುಳಿತಿದ್ದ ಫೋಟೋ ಹಾಗೂ ವಿಡಿಯೋ ಕಾಲ್ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ ಆಂತರಿಕ ವರದಿ ಬಂದ ಮೇಲೆ ಜೈಲಾಧಿಕಾರಿ ಸೇರಿದಂತೆ ಒಟ್ಟು 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಜೈಲಿನ 7 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ.ಜೈಲರ್ ಗಳಾದ ಶರಣಬಸವ ಅಮಿನಗಡ ಖಂಡೇವಾಲ್, ಸಹಾಯಕ ಜೈಲರ್ಗಳಾದ ಪುಟ್ಟಸ್ವಾಮಿ, ಶ್ರೀಕಾಂತ್ ತಳವಾರ್, ಜೈಲಿನ ಹೆಡ್ ವಾರ್ಡರ್ಗಳಾದ ವೆಂಕಪ್ಪ, ಸಂಪತ್, ಬಸಪ್ಪನನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಿದರು. ಈ ಕುರಿತು ಕಳೆದ ದಿನ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದ್ದೆ. ಅವರು ಸುಮಾರು 1 ಗಂಟೆಯವರೆಗೂ ತನಿಖೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಅವರಿಗೆ ಆ ರೀತಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ವರದಿ ಬಂದಿದೆ. ಅದರ ಪ್ರಕಾರ ಈಗ 7 ಜನ ಅಮಾನತು ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆಮೇಲೆ ಹಿರಿಯ ಅಧಿಕಾರಿಗಳು ಯಾರಿದ್ದಾರೆ ಎಂದು ತಿಳಿದುಕೊಂಡು ವರದಿ ಬಂದ ತಕ್ಷಣ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತವೆ ಎಂದರು.