ಬೆಂಗಳೂರು: ಕಬ್ಬಿಗೆ 3,500 ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಿದ ಬಳಿಕ, ನಿನ್ನೆಯಷ್ಟೇ ರಾಜ್ಯ ಸರ್ಕಾರವು ರೈತರ ಹೋರಾಟಕ್ಕೆ ಮಣಿದು 3300 ಪ್ರತಿ ಟನ್ ಗೆ ದರ ನಿಗದಿ ಮಾಡಿರುವ ಬಗ್ಗೆ ಘೋಷಣೆ ಮಾಡಿತ್ತು.

ಇದೀಗ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಹಣ ನೀಡುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 11.25% ರಿಕವರಿ (ಇಳುವರಿ) ಇದ್ದರೆ ರೂ.3200+100 ಸೇರಿ ಒಟ್ಟು 3300 ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

10.25% ರಿಕವರಿಗೆ 3100+100 ಸೇರಿ 3200 ರೂಪಾಯಿ ( ಹೆಚ್ಚುವರಿ ರೂ.100 ಇದರಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ರೂ.50 ಮತ್ತು ರಾಜ್ಯ ಸರ್ಕಾರ ರೂ.50 ಕಬ್ಬಿನ ಬೆಲೆಗೆ ಹೆಚ್ಚುವರಿ ನೀಡುವಂತೆ ಈ ಬಗ್ಗೆ ಸರ್ಕಾರ ತನ್ನ ಆದೇಶದಲ್ಲಿ ಸೂಚಿಸಿದೆ.

ಕಬ್ಬು ಬೆಳೆಗಾರರ ಆಗ್ರಹಕ್ಕೆ ಮಣಿದು ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿ ಈ ಮೇಲಿನಂತೆ ದರ ನಿಗದಿ ವಿಚಾರವಾಗಿ ತೀರ್ಮಾನ ಕೈಗೊಂಡು ಮೌಖಿಕವಾಗಿ ಕಬ್ಬು ದರ ನಿಗದಿ ಕುರಿತಾಗಿ ಪರಿಷ್ಕೃತ ದರವನ್ನು ಘೋಷಿಸಿದ್ದರು.