ಬೆಂಗಳೂರು: ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ (3.36 ಕಿ.ಮೀ.) ನಿರ್ಮಾಣ ಆಗಿರುವ ದಕ್ಷಿಣ ಭಾರತದ ಪ್ರಥಮ ಡಬಲ್ ಡೆಕ್ಕರ್ (ಎಲಿವೆಟೆಡ್ ರೋಡ್ ಕಂ ಮೆಟ್ರೋ ಫ್ಲೈಓವರ್) ಇಂದು ಉದ್ಘಾಟನೆಯಾಗಲಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಮಧ್ಯಾಹ್ನ 3 ಗಂಟೆಗೆ ಡಬಲ್ ಡೆಕ್ಕರ್ ಉದ್ಘಾಟಿಸಲಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮೆಟ್ರೋ ಹಳದಿ (ಆರ್.ವಿ.ರಸ್ತೆ – ಬೊಮ್ಮಸಂದ್ರ) ಮಾರ್ಗದಲ್ಲಿ ಈ ಡಬಲ್ ಡೆಕ್ಕರ್ ನಿರ್ಮಾಣವಾಗಿದೆ.
ನಗರದಲ್ಲಿ ವಿಪರೀತ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಒಂದಾಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಡಬಲ್ ಡೆಕ್ಕರ್‌ನಿಂದ ಟ್ರಾಫಿಕ್ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗುವ ನಿರೀಕ್ಷೆಯಿದೆ.
ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮವು ರೂಪಿಸಿದ ಈ ಡಬಲ್ ಡೆಕ್ಕರ್ ಸಂಪೂರ್ಣ ಪ್ರಯೋಜನವನ್ನು ಮುಂದಿನ ವರ್ಷದಿಂದಲೇ ನಿರೀಕ್ಷಿಸಬಹುದಾಗಿದೆ. ನೆಲಮಟ್ಟದಿಂದ 8 ಮೀಟರ್ ಎತ್ತರದಲ್ಲಿ ವಾಹನ ಓಡಾಟಕ್ಕಾಗಿ ಮೇಲ್ಸೇತುವೆ ನಿರ್ಮಾಣವಾಗಿದ್ದು, 16 ಮೀಟರ್ ಎತ್ತರದಲ್ಲಿ ಮೆಟ್ರೋ ಹಳದಿ ಮಾರ್ಗವಿದೆ. ಇಲ್ಲಿ ವರ್ಷಾಂತ್ಯಕ್ಕೆ ಚಾಲಕರಹಿತ ರೈಲಿನ ಸಂಚಾರ ಶುರುವಾಗುವ ಸಾಧ್ಯತೆಯಿದೆ.
2019ರಲ್ಲೇ ಆರಂಭವಾಗಿದ್ದ ಈ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಅದರೆ, ಮೂರು ವರ್ಷ ತಡವಾಗಿ ಉದ್ಘಾಟನೆ ಆಗುತ್ತಿದೆ. ಸದ್ಯ ಒಂದು ಬದಿಯಲ್ಲಿ ವಾಹನ ಸಂಚಾರ ಚಾಲನೆಗೊಳ್ಳಲಿದೆ. ಸಿಗ್ನಲ್ ರಹಿತ ಎಲಿವೆಟೆಡ್ ರಸ್ತೆ ಇದಾಗಿರುವ ಕಾರಣ 5-10 ನಿಮಿಷದಲ್ಲಿ ವಾಹನಗಳು ಕ್ರಮಿಸಲು ಅನುಕೂಲವಾಗಲಿದೆ.

