ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಗರೇಟ್‌ ಹಾಗೂ ಬೀಡಿ ಸೇದುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರ ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ಲ್ಯಾನ್‌ ಮಾಡಿದೆ.

ಸಿಗರೇಟ್‌ ತುಂಡುಗಳ ವಿಲೇವಾರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ವರ್ಷಗಳ ಮೊದಲೇ ಮಾರ್ಗಸೂಚಿ ಬಿಡುಗಡೆ ಮಾಡಿದ್ದರೂ ಬೆಂಗಳೂರಿನಲ್ಲಿ ಅನುಷ್ಠಾನಗೊಂಡಿರಲಿಲ್ಲ. ಇದೀಗ ಬಿಬಿಎಂಪಿ ಸಿಗರೇಟ್‌ ತ್ಯಾಜ್ಯವನ್ನು ಬಿಸಾಡಲು ಪ್ರತ್ಯೇಕ ಕಸದ ಬುಟ್ಟಿಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.

ಸಿಗರೇಟ್‌ ತುಂಡುಗಳು ಚರಂಡಿ, ನೀರು ಮಣ್ಣಿನಲ್ಲಿ ಸೇರಿಕೊಂಡು ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಈ ಹಿನ್ನೆಲೆ ಅದನ್ನು ಜನರು ಎಲ್ಲೆಂದರಲ್ಲಿ ಬಿಸಾಡದಂತೆ ತಡೆಯಲು ಹಾಗೂ ಅವುಗಳನ್ನು ಕಲೆಕ್ಟ್‌ ಮಾಡಲು ಬೆಂಗಳೂರಿನ ಹಲವು ಕಡೆಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಹಲವು ಸ್ಥಳಗಳನ್ನು ಪಟ್ಟಿ ಮಾಡಲಾಗಿದ್ದು, ಶೀಘ್ರವೇ ಜಾರಿಯಾಗಲಿದೆ.

ಈ ಕಸದ ಬುಟ್ಟಿಗಳಲ್ಲಿ ಸಂಗ್ರಹವಾಗುವ ಸಿಗರೇಟ್‌ ತುಂಡುಗಳನ್ನು ಬಳಸಿ ಇಂಧನ ಉತ್ಪಾದನೆ ಅಥವಾ ಮರುಬಳಕೆ ಮಾಡುವ ಬಗ್ಗೆ ಚರ್ಚಿಸಿ, ಅದರ ಜವಾಬ್ದಾರಿಯನ್ನು ಸಿಗರೇಟ್‌ ತಯಾರಿಸುವ ಕಂಪನಿಗಳಿಗೆ ನೀಡಲಾಗಿದೆ. ಒಂದು ವೇಳೆ ಸಿಗರೇಟ್‌ ತ್ಯಾಜ್ಯ ಸಂಗ್ರಹ ಹಾಗೂ ಮರುಬಳಕೆ ಪ್ರಕ್ರಿಯೆ ವಿಫಲವಾದರೆ, ಅದರ ತಯಾರಕ ಸಂಸ್ಥೆಗಳ ಮೇಲೆಯೇ ಕ್ರಮ ಜರುಗಿಸಲು ಬಿಬಿಎಂಪಿ ನಿರ್ಧರಿಸಿದೆ ಎನ್ನಲಾಗಿದೆ.