ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಶ್ರೀಮತಿ ಕಮಲಾಬಾಯಿ ಶಿಕ್ಷಣ ಸಂಸ್ಥೆಯ ಕಾಂಪೌಂಡ್ ಕೆಡವಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೆಸಿಬಿ ಸಮೇತ 93 ವರ್ಷ ಹಳೆಯ ಶಾಲೆಯ ಆವರಣಕ್ಕೆ ನುಗ್ಗಿ ಗೋಡೆಯನ್ನು ಕೆಡವಿದ್ದರಿಂದ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮರಿಯಾ ಎಲಿಜಬೆತ್, ಮೊಹಮ್ಮದ್ ಜಬಿ ಮತ್ತು ಜೆರಾರ್ಡ್ ಸ್ಟೀಫನ್ ಹ್ಯಾರಿ ಆರೋಪಿಗಳು. ಜುಲೈ 5ರಂದು ಸಂಜೆ ಘಟನೆ ನಡೆದಿದೆ.
ಹ್ಯಾರಿ, ಎಲಿಜಬೆತ್ ಮತ್ತು ಜಬಿ, ಜೆಸಿಬಿ ಸಮೇತವಾಗಿ ಶಾಲೆಯೊಳಗೆ ನುಗ್ಗಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎಲಿಜಬೆತ್ ಮತ್ತು ಶಾಲಾ ಆಡಳಿತದ ನಡುವೆ 25 ವರ್ಷಗಳಿಂದ ಆಸ್ತಿ ವಿವಾದವಿದೆ ಎನ್ನಲಾಗಿದ್ದು, ಇದರಿಂದ ಘಟನೆ ನಡೆದಿದೆ ಎನ್ನಲಾಗಿದೆ. ಶಾಲಾ ಕ್ಯಾಂಪಸ್‌ನ ಒಂದು ಭಾಗ ತನಗೆ ಸೇರಿದೆ ಎಂದು ಎಲಿಜಬೆತ್ ಹೇಳಿದ್ದಾರೆ. ಆದರೆ ಶಾಲೆ ಆಡಳಿತ ಮಂಡಳಿ ಮಾತ್ರ ಕಾರ್ಪೊರೇಷನ್‌ನಿಂದ 10 ಎಕರೆ ಆಸ್ತಿಯನ್ನು ತಾವು ಖರೀದಿಸಿದ್ದೆವು ಎಂದು ಹೇಳುತ್ತಿದೆ.
ಈ ಬಗ್ಗೆ ಶಾಲೆಯ ಸಹಾಯಕ ಕಾರ್ಯದರ್ಶಿ ಅನುರಾಧಾ ಕೆ.ಪಿ ಅವರು ಪ್ರತಿಕ್ರಿಯಿಸಿ, ಶಾಲೆಯ ಆಡಳಿತ ಮಂಡಳಿಯು ಆಸ್ತಿಯ ಯಾವುದೇ ಹಕ್ಕುಗಳ ವಿರುದ್ಧ 2023ರಲ್ಲಿ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದೆ. ಕೋರ್ಟ್ ತಡೆಯಾಜ್ಞೆ ನಡುವೆಯೂ ಎಲಿಜಬೆತ್ ಮತ್ತು ಅವರ ಗುಂಪು ಕ್ಯಾಂಪಸ್ ಅತಿಕ್ರಮಣ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

