ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣದ ಸಂಬಂಧ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿದ ಸೈಬರ್ ವಂಚಕರು ಕೇರಳ ಲಾಟರಿ ಬಂದಿರುವುದಾಗಿ ನಂಬಿಸಿ ಒಟ್ಟು 13.71 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
60 ವರ್ಷದ ಎನ್ ಜಿಓ ಉದ್ಯೋಗಿ 7.45 ಲಕ್ಷ ರೂ. ಹಾಗೂ ಮಾರುತಿನಗರದ ರೈತರೊಬ್ಬರು 6.26 ಲಕ್ಷರೂ, ಹಣ ಕಳೆದುಕೊಂಡಿದ್ದಾರೆ. ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಿದ ಆರೋಪಿಗಳು, ನಿಮಗೆ ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ ಎಂದು ಸೈಬರ್ ವಂಚಕರು ಇಬ್ಬರು ದೂರುದಾರರನ್ನು ನಂಬಿಸಿದ್ದರು.
ಲಾಟರಿ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ವಂಚಕರು ನಕಲಿ ವೆಬ್‌ಸೈಟ್ ಕಳುಹಿಸಿದ್ದರು. ಈ ಇಬ್ಬರು ಲಿಂಕ್ ಓಪನ್ ಮಾಡಿದಾಗ ಲಾಟರಿ ಗೆದ್ದಿರುವಂತೆ ನಕಲಿ ಯಾಗಿ ಎಡಿಟ್ ಮಾಡಿರುವ ಫೋಟೊ ಕಂಡು ಬಂದಿತ್ತು. ಇಬ್ಬರ ನಂಬಿಕೆ ಗಿಟ್ಟಿಸಿಕೊಳ್ಳಲು ಆರ್‌ಬಿಐ ಹೆಸರಿನ ನಕಲಿ ಪತ್ರಗಳನ್ನು ಕಳುಹಿಸಿದ್ದರು.
ನಂತರ ಜಿಎಸ್‌ಟಿ, ಟಿಡಿಎಸ್, ಆದಾಯ ತೆರಿಗೆ ಪಾವತಿಸುವಂತೆ ಹೇಳಿ ಹಂತ ಹಂತವಾಗಿ ಇಬ್ಬರಿಂದ 13.71 ಲಕ್ಷ ರೂ. ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿಕೊಂಡಿದ್ದರು. ಇದಾದ ಬಳಿಕ ಆರೋಪಿಗಳ ಮೊಬೈಲ್ ಗಳಿಗೆ ದೂರುದಾರರು ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆ ವೇಳೆ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಇಬ್ಬರೂ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

