ಬೆಂಗಳೂರು: ಹಗರಣಗಳನ್ನು ಮುಚ್ಚಿಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ನೀಡುವ ವಿಚಾರವನ್ನು ಮುನ್ನೆಲೆಗೆ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.
ವಿಧಾನಸೌಧದ ಪಡಸಾಲೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ಮೇಲೆ ಹಗರಣಗಳು ಸುತ್ತಿಕೊಂಡಿವೆ. ಅವುಗಳನ್ನು ವಿಷಯಾಂತರ ಮಾಡುವುದಕ್ಕೆ ಮೀಸಲಾತಿ ವಿಚಾರವನ್ನು ಎತ್ತಿದ್ದಾರೆ ಎಂದು ಹೇಳಿದ್ದಾರೆ.
ಮೀಸಲಾತಿ ಕುರಿತು ಸರ್ಕಾರ ತನ್ನ ಪ್ರಕಟಣೆ ಹೊರಡಿಸಿದೆ. ಬಳಿಕ ಅದಕ್ಕೆ ತಡೆದಿದೆ. ಕರ್ನಾಟಕದಿಂದ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ವಲಯದಿಂದ ಉದ್ಯೋಗ ಮೀಸಲಿಡಬೇಕು ಎಂಬುದರ ಕುರಿತು ಸಿಎಂ ತಮ್ಮ ನಿಲುವು ಪ್ರಕಟಿಸಬೇಕು. ನಿಮ್ಮ ಸರ್ಕಾರದ ಮೇಲೆ ಹಗರಣ ಸುತ್ತಿಕೊಂಡಿದೆ. ಅದಕ್ಕಾಗಿ ಈ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಣ ವರ್ಗಾವಣೆ ಮಾಡಿ ವಂಚನೆ ಮಾಡಿರೋದು ಸಿಎಂ ಗಮನಕ್ಕೂ ಬಂದಿದೆ. ಇದರಿಂದಾ ನಿಮ್ಮ ಸರ್ಕಾರದ ಘನತೆಗೆ ಚ್ಯುತಿ ತಂದಿದೆ. ಹೀಗಾಗಿ ಜನರನ್ನು ಭಾವನಾತ್ಮಕವಾಗಿ ಬದಲಾಯಿಸಲು ಮೀಸಲಾತಿ ವಿಚಾರವನ್ನು ಎತ್ತಲಾಗಿದೆ ಎಂದು ಸಿಟಿ ರವಿ ಆರೋಪಿಸಿದರು.
ಉದ್ದಿಮೆಯಲ್ಲಿ ಎಷ್ಟು ಉದ್ಯೋಗ ಇದೆ. ಕನ್ನಡಿಗರಿಗೆ ಎಷ್ಟು, ಹೊರಗಿನವರಿಗೆ ಎಷ್ಟು ಅಂತಮಾಹಿತಿ ಪಡೆಯಬೇಕಿತ್ತು. ಯಾವ ಉದ್ಯೋಗಕ್ಕೆ ಕೌಶಲದ ಅವಶ್ಯಕತೆ ಇದೆ ಅಂತ ಮಾಹಿತಿ ಪಡೆಯಬೇಕಿತ್ತು. ಹಾಗಾದರೆ ಮಾತ್ರ ಅದು ಸರ್ಕಾರದ ಬದ್ಧತೆಯಾಗಲಿದೆ.
ಸಿದ್ದರಾಮಯ್ಯ ಬದಲಾಗಿದ್ದಾರೆ. ಈ ಹಗರಣಗಳೇ ಅದಕ್ಕೆ ಸ್ಪಷ್ಟ ಉದಾಹರಣೆ. ಚಾಮುಂಡೇಶ್ವರಿ ಉಪಚುನಾವಣೆ ಬಂದಾಗ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಆಗ ನಾನು ಹೋರಾಟಗಾರರು ಸೋಲಬಾರದು ಎಂದು ಹೇಳಿದ್ದೆ. ಅಹಿಂದ ನಾಯಕರು ಗೆಲ್ಲಬೇಕು ಎಂದಿದ್ದೆ ಎಂದು ಸಿಟಿ ರವಿ ಹೇಳಿದ್ದಾರೆ.
ಲೋಕಾಯುಕ್ತ ಪವರ್ ಕಡಿಮೆ ಮಾಡಿ, ಎಸಿಬಿ ರಚನೆ ಮಾಡಿದವರು ಸಿಎಂ ಸಿದ್ದರಾಮಯ್ಯ. ಎರಡೂ ಇಲಾಖೆ ದುರ್ಬಳಕೆ ಮಾಡಿಕೊಂಡವರು ನೀವೇ. ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಿಟಿ ರವಿ ಆಗ್ರಹಿಸಿದರು.

