ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ವಿರುದ್ಧದ 70ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದು ಅದನ್ನು ಸಿಐಡಿ ತಾಂತ್ರಿಕ ಘಟಕಕ್ಕೆ ರವಾನಿಸಲಾಗಿದೆ.

ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಘಟನೆ ದಿನ ನಟ ದರ್ಶನ್‌, ಪ್ರೇಯಸಿ ಪವಿತ್ರಾಗೌಡ ಹಾಗೂ ಅವರ ಸಹಚರರ ಯಾವೆಲ್ಲ ಸ್ಥಳಗಳಲ್ಲಿದ್ದರು, ಯಾವ ಮಾರ್ಗದಲ್ಲಿ ಸಂಚರಿಸಿದ್ದಾರೆ ಎಂಬುದರ ಕುರಿತು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಸಿಐಡಿಯ ತಾಂತ್ರಿಕ ಘಟಕಕ್ಕೆ ರವಾನಿಸಿದ್ದಾರೆ.

ಕೃತ್ಯಕ್ಕೆ ಮುನ್ನ ಆರೋ ಪಿಗಳು ಪಾರ್ಟಿ ಮಾಡಿದ್ದ ಆರ್‌.ಆರ್‌.ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಿಂದ ಪಟ್ಟಣಗೆರೆ ಶೆಡ್‌ ಮಾರ್ಗದಲ್ಲಿರುವ ರಸ್ತೆಯ ಅಕ್ಕಪಕ್ಕದ ಸಿಸಿ ಕ್ಯಾಮೆರಾ ದೃಶ್ಯಗಳು, ಪಟ್ಟಣಗೆರೆ ಶೆಡ್‌ನ‌ಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಮೃತದೇಹ ಸಾಗಿಸಿರುವ ಸುಮನಹಳ್ಳಿ ರಾಜಕಾಲುವೆ ಮಾರ್ಗದಲ್ಲಿನ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ದರ್ಶನ್‌, ಪವಿತ್ರಾಗೌಡ ಸೇರಿ ಪ್ರಮುಖ ಆರೋಪಿಗಳ ಮನೆಗಳು, ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸೇರಿ ಇದುವರೆಗೂ 70ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.