ಬೆಂಗಳೂರು: ನಾವು ನಾಯಿಯನ್ನೇ ಮುಟ್ಟಲ್ಲ, ಅಂತಹದ್ದರಲ್ಲಿ ನಾಯಿ ಮಾಂಸ ತಂದು ತಿನ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 10-12 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತದೆ, ಅದನ್ನ ನಾಯಿ ಅನ್ನುತ್ತಿದ್ದಾರೆ. ಈ ವ್ಯವಹಾರವನ್ನ ನಂಬಿಕೊಂಡು ಸಾವಿರಾರು ಜನ ಜೀವನ ನಡೆಸುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ರೋಲ್‌ಕಾಲ್ ಸಿಗಲಿಲ್ಲ ಅಂತ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಶಿ, ರಿಜ್ವಾನ್, ಹಿಲಾಲ್ ಅನ್ನುವವರು ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಹಿಂದೆ ಬಿದ್ದಿದ್ದರು. ಮಾಂಸ ಸಾಗಿಸುತ್ತಿರುವ ವಿಚಾರವನ್ನು ಪುನೀತ್ ಕೆರೆಹಳ್ಳಿಗೆ ತಿಳಿಸಿ, ರೋಲ್‌ಕಾಲ್ ಮಾಡೋದಕ್ಕೆ ಮುಂದಾಗಿದ್ದರು. ಈ ಬಗ್ಗೆ ನಾನು ಕಳೆದ ಜೂನ್ 26ರಂದೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ, ಎನ್‌ಸಿಆರ್ ಕೂಡ ಆಗಿದೆ. ನಮಗೆ ಹಿಂಸೆ ಕೊಡುತ್ತಿದ್ದಾರೆ ಅಂತಾ ಪೊಲೀಸರಿಗೆ ದೂರಿನ ಮೂಲಕ ತಿಳಿಸಿದ್ದೆ. ನಾವು ರೋಲ್‌ಕಾಲ್‌ಗೆ ಆಸ್ಪದ ನೀಡದೇ ಇದ್ದಿದ್ದರಿಂದ ಕುರಿ ಮಾಂಸವನ್ನು ನಾಯಿ ಮಾಂಸ ಅಂತ ಸುಳ್ಳು ಹಬ್ಬಿಸಿದ್ದಾರೆ ಎಂದರು.
ರಾಜಸ್ಥಾನದ ಜೈಪುರದಿಂದ ಮಾಂಸ ತರಿಸುತ್ತಿದ್ದೇವೆ. ಅಲ್ಲಿನ ಕುರಿಗಳಿಗೆ ಬಾಲ ಉದ್ದವಾಗಿಯೇ ಇರುತ್ತದೆ. ನಾವು ನಾಯಿಯನ್ನೇ ಮುಟ್ಟಲ್ಲ. ಅಪ್ಪಿ ತಪ್ಪಿ ಸ್ವಲ್ಪ ನಾಯಿ ಟಚ್ ಆದರೂ ಮಸೀದಿ ಒಳಕ್ಕೇ ಹೋಗಲ್ಲ. ಸ್ನಾನ ಮಾಡಿ, ಬಟ್ಟೆ ಬದಲಿಸಿ ಆಮೇಲೆ ಮಸೀದಿಗೆ ಹೋಗುತ್ತೇವೆ. ಅಂತಹದ್ದರಲ್ಲಿ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ ಅಂತ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

