ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆಕೆಯ ತಂದೆ ಮತ್ತು ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತರಬನಹಳ್ಳಿಯಲ್ಲಿ ನಡೆದಿದೆ.
ಆರೋಪಿಯನ್ನು ಪಾಂಡುರಂಗ (29) ಎಂದು ಗುರುತಿಸಲಾಗಿದ್ದು, ಆತ ತನ್ನ ಪ್ರೇಯಸಿ ಸುಮಲತಾ, ಆಕೆಯ ತಂದೆ ಶ್ರೀರಾಮ (48) ಹಾಗೂ ತಾಯಿ ಮಂಜಮ್ಮ (42) ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪ್ರಸ್ತುತ ಮೂವರಿಗೆ ಗಂಭೀರವಾದ ಗಾಯಗಳಾಗಿದ್ದು, ಮೂವರು ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಲತಾ 4 ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದಳು. ಆಕೆ ಯಶವಂತಪುರದ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಳು. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಆಕೆಗೆ ಪಾಂಡುರಂಗನ ಪರಿಚಯವಾಗಿತ್ತು. ಬಳಿಕ ಸುಮಲತಾ ಆತನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಾಲ್ಕು ವರ್ಷಗಳಿಂದ ಇಬ್ಬರು ಮಹಾಲಕ್ಷ್ಮೀ ಲೇಔಟ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದರು.
ಇತ್ತೀಚೆಗೆ ಸುಮಲತಾ ಹಾಗೂ ಪಾಂಡುರಂಗ ನಡುವೆ ಜಗಳ ಏರ್ಪಟ್ಟು ಎರಡು ತಿಂಗಳ ಹಿಂದೆ ಇಬ್ಬರು ದೂರವಾಗಿದ್ದರು. ಪಾಂಡುರಂಗ ಮತ್ತೊಂದು ಯುವತಿಯ ಸಹವಾಸ ಮಾಡುತ್ತಿದ್ದಾನೆ ಎಂದು ಶಂಕಿಸಿ ಸುಮಲತಾ ತಾಯಿಯ ಮನೆ ಸೇರಿದ್ದಳು. ಮೊನ್ನೆ ತರಬನಹಳ್ಳಿಯ ಸುಮಲತಾ ಮನೆ ಬಳಿ ಬಂದಿದ್ದ ಆರೋಪಿ ಪಾಡುರಂಗ ಸುಮಲತಾಳಿಗೆ ದ್ವಿಚಕ್ರ ವಾಹನ ಕೊಡು ಎಂದಿದ್ದ. ಈ ವೇಳೆ ಅದು ತನ್ನ ಅಕ್ಕನದ್ದು, ನಾನು ಕೊಡಲ್ಲ ಎಂದು ಸುಮಲತಾ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಗಲಾಟೆ ಮಾಡಿದ್ದಾನೆ.
ಸುಮಲತಾ, ಆಕೆಯ ತಂದೆ ಮತ್ತು ತಾಯಿ ಮೂವರೂ ಕೂಡಾ ಪಾಂಡುರಂಗನಿಗೆ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಪಾಂಡುರಂಗ ಸ್ಥಳದಿಂದ ತೆರಳಿ ಸುಮಾರು ಅರ್ಧ ಗಂಟೆಯ ಬಳಿಕ ವಾಪಸ್ ಬಂದು ಮತ್ತೆ ಗಲಾಟೆ ಮಾಡಿದ್ದಾನೆ. ತನ್ನೊಂದಿಗೆ ಪೆಟ್ರೋಲ್ ತಂದಿದ್ದ ಪಾಂಡುರಂಗ ಅದನ್ನು ಸುಮಲತಾ ಹಾಗೂ ಆಕೆಯ ಪೋಷಕರ ಮೇಲೆ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೆಂಕಿ ಹಚ್ಚಿದ ಪರಿಣಾಮ ಮೂವರಿಗೂ ಗಂಭೀರವಾದ ಗಾಯಗಳಾಗಿವೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಆರೋಪಿ ಪಾಂಡುರಂಗನನ್ನು ಬಂಧಿಸಿದ್ದಾರೆ.

