ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹಿಂದೂ ಸಂಘಟನೆ ಮುಖಂಡ ಪುನೀತ್​ ಕೆರೆಹಳ್ಳಿ ಜೈಲುಪಾಲಾಗಿರುವ ಘಟನೆ ನಡೆದಿದೆ. 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್​ನ ನ್ಯಾಯಾಧೀಶರಿಂದ ಆದೇಶ ಹೊರಡಿಸಲಾಗಿದೆ.

ಇಂದು ಎನ್​​ಜಿವಿಯಲ್ಲಿರುವ ನಿವಾಸದಲ್ಲಿ ಜಡ್ಜ್ ಮುಂದೆ​ ಪೊಲೀಸರು ಹಾಜರುಪಡಿಸಿದ್ದರು. ಸೋಮವಾರ ಜಾಮೀನು ಅರ್ಜಿ ಸಲ್ಲಿಸುವಂತೆ ಜಡ್ಜ್‌ ಸೂಚನೆ ನೀಡಿದ್ದಾರೆ.

ಪುನೀತ್ ಕೆರೆಹಳ್ಳಿ ಪರ ವಕೀಲ ಉಮಾಶಂಕರ್ ಪ್ರತಿಕ್ರಿಯಿಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಕಾಟನ್ ಪೇಟೆ ಪೊಲೀಸರು ಪುನೀತ್ ಬಂಧಿಸಿದ್ದರು.

ಈಗ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ವಿಚಾರಣೆಗೆ ಬರಲಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ನಾಯಿ ಮಾಂಸ ಸೇಲ್ ಮಾಡಲಾಗುತ್ತಿದೆ ಎಂಬ ಆರೋಪ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಜೈಪುರದಿಂದ ಬಂದಿದ್ದ ಲೋಡ್​ಗಟ್ಟಲೇ ಬಾಕ್ಸ್​ಗಳು ಶುಕ್ರವಾರ ಮೆಜೆಸ್ಟಿಕ್​ನಲ್ಲಿ ಅನ್​ಲೋಡ್ ಆಗುತ್ತಿತ್ತು, ಈ ವೇಳೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಬಾಕ್ಸ್​ಗಳಲ್ಲಿ ಇರುವುದು ನಾಯಿ ಮಾಂಸ. ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಅಂತ ಆರೋಪಿಸಿ, ಹೈಡ್ರಾಮಾ ಮಾಡಿದ್ದರು.

ಈ ವೇಳೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹಾಗೂ ಪುನೀತ್ ಕೆರೆಹಳ್ಳಿ ನಡುವೆ ವಾಗ್ವಾದವೂ ನಡೆದಿತ್ತು. ಇದೇ ಪ್ರಕರಣ ಇದೀಗ ಪೊಲೀಸ್ ಠಾಣೆ ಹಾಗೂ ಆಹಾರ ಇಲಾಖೆಯ ಮೆಟ್ಟಿಲೇರಿದೆ. ರಸ್ತೆಯಲ್ಲಿ ಗಲಾಟೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ 2ಕೇಸ್ ಜಡಿದು ಅರೆಸ್ಟ್ ಮಾಡಿದ್ದಾರೆ.