ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವರರ ಪ್ರಮಾಣ ಹೆಚ್ಚಾಗಿದ್ದು ಇದನ್ನ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಗಳು ದುಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.

ಶನಿವಾರದಿಂದ ಬುಧವಾರದವರೆಗೆ ಸಾಲು ಸಾಲು ರಜೆ ರಜೆಗಳಿದ್ದು, ಇದನ್ನು ಗಮನಿಸಿಯೇ ಖಾಸಗಿ ಬಸ್‌ ಗಳು ಟಿಕೆಟ್‌ ದರವನ್ನು ಶೇ.50-60 ರಷ್ಟು ಹೆಚ್ಚಿಸಿ, ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿವೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್‌ಗಳಲ್ಲಿ 500 ರೂ.ಯಿಂದ 650 ರೂ. ವರೆಗೆ ಇದ್ದ ದರಗಳು ಈಗ 1000 ರೂ.ನಿಂದ 2000 ರೂ.ವರೆಗೆ ಏರಿಕೆಯಾಗಿದೆ. ಕಾರ್ಕಳಕ್ಕೆ 700 ರೂ. ನಿಂದ 900 ರೂ. ಇದಿದ್ದು, ಈಗ 1300 ರೂ.ಯಿಂದ 1700 ರೂ.ಗೆ ಏರಿದೆ.

ಮಂಗಳೂರಿಗೆ 650 ರೂ.ನಿಂದ 1000 ರೂ.ವರೆಗೆ ಇದ್ದ ದರ ಈಗ 2000 ರೂ.ವರೆಗೆ ತಲುಪಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ 920 ರೂ.ನಿಂದ 1500 ರೂ.ವರೆಗಿದ್ದ ದರ ಈಗ 3500 ರೂ.ವರೆಗೆ ಏರಿಕೆ ಮಾಡಲಾಗಿದೆ. ಇದೇ ರೀತಿ ರಾಜ್ಯ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್‌ ದರ ಬರೆ ಎಳೆದಿದೆ.

ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ದರ ಏರಿಕೆ ಮಾಡಿದ್ದು, ದುಪ್ಪಟ್ಟಾಗಿಲ್ಲ. ಶೇ.50 ರಿಂದ 60 ರಷ್ಟು ಮಾತ್ರ ಏರಿಕೆ ಮಾಡಿದ್ದೇವೆ. ಶಕ್ತಿ ಯೋಜನೆ ಜಾರಿಯಾದಾಗಿಂದ ಖಾಸಗಿ ಬಸ್‌ ಮಾಲೀಕರು ದೊಡ್ಡ ನಷ್ಟ ಎದುರಿಸುತ್ತಿದ್ದಾರೆ ಎಂದು ಖಾಸಗಿ ಬಸ್‌ ಮಾಲಿಕರು ತಿಳಿಸಿದ್ದಾರೆ.