ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸಲು ಬೆಂಗಳೂರು ದಕ್ಷಿಣ, ಕೇಂದ್ರ, ಪೂರ್ವ ನಗರ ಪಾಲಿಕೆಗಳು ಸಿದ್ಧತೆ ಆರಂಭಿಸಿದೆ.

ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾ ಸಂಕೀರ್ಣಗಳು/ ಮೈದಾನಗಳ ಮಾಹಿತಿಯನ್ನು ಸಂಗ್ರಹಿಸಿ, ಅವುಗಳ ಆವರಣಗಳಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಲ್ಲಿ ಇರಿಸಬೇಕು ಎಂದು ಆಯುಕ್ತ ಕೆ.ಎನ್‌. ರಮೇಶ್‌ ಅವರು ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.

ಸ್ಥಳಾಂತರಿಸಬೇಕಾದ ನಾಯಿಗಳ ಅಂದಾಜು, ಆಶ್ರಯ ತಾಣ ನಿರ್ಮಿಸಲು ಸ್ಥಳ ಗುರುತಿಸುವುದು, ನಾಯಿಗಳನ್ನು ಹಿಡಿಯಲು ಮತ್ತು ನಿರ್ವಹಿಸಲು ಎನ್‌ಜಿಒಗಳನ್ನು ಗುರುತಿಸುವುದು, ನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ಹಾಕುವುದು ಮತ್ತು ಅವುಗಳನ್ನು ಪೋಷಿಸುವುದು, ಆಹಾರ ಮತ್ತು ಪಶುವೈದ್ಯಕೀಯ ಆರೈಕೆಗೆ ಕ್ರಮ, ಕೆನ್ನೆಲ್‌ ಮೂಲಸೌಕರ್ಯ ಅಭಿವೃದ್ಧಿಗಾಗಿ ಅನುದಾನ ನಿಗದಿಪಡಿಸಲು ಪ್ರಸ್ತಾವ ಸಲ್ಲಿಸಲು ತಿಳಿಸಿದರು.

ಅಧಿಕಾರಿಗಳು ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿ, ಪ್ರತಿಯೊಂದು ಕಾರ್ಯವನ್ನೂ ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.