ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯು ಡ್ರಗ್ಸ್​ ದಂಧೆ, ಮಾದಕ ವಸ್ತು ಬಳಕೆಗೆ ಬ್ರೇಕ್ ಹಾಕಲು ದಿಟ್ಟ ಹೆಜ್ಜೆ ಇಟ್ಟು, ಮಹತ್ವದ ಕ್ರಮಕೈಗೊಂಡಿದೆ.

“ನಶೆ ಮುಕ್ತ ಕರ್ನಾಟಕ” ಎಂಬ ಹೊಸ ಮೊಬೈಲ್​​​ ಆ್ಯಪ್‌ ಅನ್ನು ಪೊಲೀಸ್ ಇಲಾಖೆಯು ಪರಿಚಯಿಸಿದೆ. ಈ ಆ್ಯಪ್‌ ಗೂಗಲ್ ಪ್ಲೇ ಸ್ಟೋರ್​​​​​ನಲ್ಲಿ ಲಭ್ಯ ಇದೆ. ಗಾಂಜಾ, ಡ್ರಗ್ಸ್, ಡ್ರಗ್ಸ್ ಪೆಡ್ಲರ್, ಡ್ರಗ್ಸ್​​ ಅಡ್ಡೆ, ಸಾಗಾಣಿಕೆ ಮುಂತಾದ ಅಕ್ರಮ ಕುರಿತಾಗಿ ಮಾಹಿತಿಯನ್ನು ಸಾರ್ವಜನಿಕರು “ನಶೆ ಮುಕ್ತ ಕರ್ನಾಟಕ ಆಪ್” ಮೂಲಕ ಹಂಚಿಕೊಳ್ಳಬಹುದು. ಮಾಹಿತಿ ನೀಡಿದವರ ವಿವರ ಪೊಲೀಸರು ಗೌಪ್ಯವಾಗಿಡುತ್ತಾರೆ.

ಕನ್ನಡ, ಇಂಗ್ಲಿಷ್​ ಭಾಷೆಯಲ್ಲಿ ಆ್ಯಪ್‌​ ಅಭಿವೃದ್ಧಿಪಡಿಸಲಾಗಿದೆ. ಮಾಹಿತಿ ಬಂದ ಆಧಾರದಲ್ಲಿ ಖಚಿತತೆ ಮಾಡಿಕೊಂಡು ಕರ್ನಾಟಕ ಪೊಲೀಸ್​ ಇಲಾಖೆಯಿಂದ ಸಂಬಂಧಿಸಿದ ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ರಾಜ್ಯದ ಯಾವ ಮೂಲೆಯಿಂದಲೂ ಯಾರೂ ಬೇಕಾದರೂ ಮಾದಕ ವಸ್ತುಗಳ ಅಕ್ರಮದ ಕುರಿತು ಮಾಹಿತಿ ಇಲಾಖೆಯೊಂದಿಗೆ ಹಂಚಿಕೊಳ್ಳಬಹುದು.