ಬೆಂಗಳೂರು: ಕಾರು ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಮಾರತ್‌ಹಳ್ಳಿ ಸಮೀಪದ ಬೋರ್‌ವೆಲ್ ಜಂಕ್ಷನ್‌ನಲ್ಲಿ ನಡೆದಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದರು ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ.
ರತ್ನಮ್ಮ (47) ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ರತ್ನಮ್ಮ ದಿನನಿತ್ಯ ಹೂವು ಮಾರಿಕೊಂಡು ಜೀವನ ನಡೆಸ್ತಿದ್ದರು. ಬೋರ್‌ವೆಲ್ ಜಂಕ್ಷನ್ ಬಳಿ ರತ್ನಮ್ಮ ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ಬರುತ್ತಿದ್ದರು.
ಇಂದು ಬೆಳಗ್ಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರತ್ನಮ್ಮ ಅವರಿಗೆ ಮುಂಭಾಗದಿಂದ ನೆಕ್ಸಾನ್ ಕಾರು ಬಂದು ಡಿಕ್ಕಿಯಾಗಿದೆ. KA 03 NL 2547 ನೋಂದಣಿ ಸಂಖ್ಯೆಯ ಕಣಿ ಎಂಬುವವರ ಕಾರು ಅಪಘಾತಕ್ಕೆ ಕಾರಣವಾಗಿದೆ.
ಕಾರು ಚಾಲಕ ಕಿಣಿ ಅವರು HAL ಹೆಲಿಕಾಪ್ಟರ್ ಡಿವಿಷನ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್‌ಎಎಲ್ ಏರ್‌ಪೋರ್ಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

