ಬೆಂಗಳೂರು: ರಾಜ್ಯದ ಬಹುತೇಕ ಪಂಚಾಯತ್‌ಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಪಂಚಾಯತ್‌ಗಳ ಮೇಲ್ದರ್ಜೆಯಿಂದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಾಗಿ ಬಂದಿದ್ದು, ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ, ಮೀಸಲಾತಿ ನಿರ್ಧರಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗುವುದು. ಆಯೋಗವು 45 ದಿನಗಳಲ್ಲಿ ಚುನಾವಣೆ ನಡೆಸುತ್ತದೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಿಬ್ಬಂದಿ ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕಾಲಾವಕಾಶ ಕೇಳಲಾಗಿದೆ ಎಂದು ತಿಳಿಸಿದರು.

ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆ ಹುಟ್ಟುಹಾಕಿದ್ದರು. ಕರ್ನಾಟಕದಲ್ಲಿ 1980ರಲ್ಲಿ ನಜೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿದರೆ, ದಿವಂಗತ ಪ್ರಧಾನಿ ರಾಜೀವ್ ಗಾಂಧೀಜಿಯವರು ದೇಶದಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು 1989ರಲ್ಲಿ 64ನೇ ಸಾಂವಿಧಾನಿಕ ತಿದ್ದುಪಡಿಗೆ ಪ್ರಯತ್ನ ಮಾಡಿದ್ದರು. ನಂತರ 1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿ ಮಾಡಿ, 1993ರ ಏಪ್ರಿಲ್ 24 ರಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಅಂದರೆ ಗ್ರಾಮಗಳ ಆಡಳಿತವನ್ನು ಅದೇ ಗ್ರಾಮದವರೇ ನಿರ್ವಹಿಸಬೇಕು ಎಂಬುದೇ ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.