ಬೆಂಗಳೂರು: ಶಂಕಿತ ಉಗ್ರನನ್ನು ಎನ್​ಐಎ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿಯಲ್ಲಿ ಬಂಧಿಸಿರುವ ಘಟನೆ ನಡೆದಿದೆ.

ಗಿರೀಶ್ ಬೋರಾ ಅಲಿಯಾಸ್ ಗೌತಮ್ ಅನ್ನೊ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಉಗ್ರ ಗೌತಮ್ ಉಲ್ಫಾ ಸಂಘಟನೆಗೆ ಸೇರಿದವನು ಎಂಬುದು ಆರಂಭಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಗುವಹಾತಿಯಲ್ಲಿ ಐಇಡಿ ಬಾಂಬ್ ಇಟ್ಟು ಬೆಂಗಳೂರಿಗೆ ಫ್ಯಾಮಿಲಿ ಸಮೇತ ಬಂದಿದ್ದ ಈ ಉಗ್ರ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಗೌತಮ್ ಎನ್ನುವ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ಬಗ್ಗೆ ಪಕ್ಕಾ ಮಾಹಿತಿಯನ್ನು ಪಡೆದ ಎನ್​ಐಎ ತಂಡ ಈತನನ್ನು ಬಲೆಗೆ ಕೆಡವಿದೆ.

ಗುವಹಾತಿಯಲ್ಲಿ ಒಟ್ಟು ಐದು IED ಬಾಂಬ್​ಗಳನ್ನು ಇಟ್ಟಿದ್ದ ಈತ ಬೆಂಗಳೂರಿನ ಜಿಗಣಿಗೆ ಬಂದು ವಾಸವಾಗಿದ್ದ. ಇಲ್ಲಿಯೂ ಕೂಡ ಒಂದಷ್ಟು ವಿಧ್ವಂಸಕಾರಿ ಕೃತ್ಯಕ್ಕೆ ಯೋಜನೆ ನಡೆಸಿದ್ದ ಎಂಬ ಮಾಹಿತಿಗಳು ಕೂಡ ತಿಳಿದು ಬಂದಿವೆ. ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳನ್ನ ವಶಕ್ಕೆ ಪಡೆದಿರುವ ಎನ್​ಐಎ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಸ್ಸಾಂಗೆ ಕರೆದೊಯ್ದಿದೆ.