ಬೆಂಗಳೂರು: ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ, ಆಯುಷ್ ಸಚಿವಾಲಯ (National Medicinal Plants Board, Ministry of AYUSH) , ಭಾರತ ಸರ್ಕಾರ, ನವದೆಹಲಿ ಇವರಿಂದ “Species Specific Campaign on Shatavari – For Better Health” ಅಭಿಯಾನದಡಿ ಪ್ರತಿಷ್ಠಿತ ಶತಾವರಿ ಯೋಜನೆ ಮಂಜೂರಾಗಿದೆ.

ಈ ಯೋಜನೆಗೆ ಬೆಂಗಳೂರಿನ Karnataka State Medicinal Plants Authority (KaMPA) ಬೆಂಬಲ ನೀಡುತ್ತಿದೆ. ಈ ಮಹತ್ವದ ಮಾನ್ಯತೆಯ ಭಾಗವಾಗಿ, ಶತಾವರಿ ಯೋಜನೆ ಉದ್ಘಾಟನಾ ಸಭೆ
ಫೆಬ್ರವರಿ 20, 2026 ರಂದು ಜಿಸಿಯು ಆವರಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ KaMPAನ ಹಿರಿಯ ಸಲಹೆಗಾರರಾದ ಡಾ. ಎಂ. ಜೆ. ಪ್ರಭು ಗೌರವ ಅತಿಥಿಯಾಗಿ ಆಗಮಿಸಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ. ಎಂ. ರಾಮಚಂದ್ರ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಉಪಕುಲಪತಿಗಳಾದ ಡಾ. ರಾಮಚಂದ್ರ ಗೌಡ ಅವರು ಶತಾವರಿ ಅಭಿಯಾನದ ಉದ್ದೇಶಗಳು ಮತ್ತು ಗುರಿಗಳನ್ನು ವಿವರಿಸಿ, ವಿಶೇಷವಾಗಿ ಗ್ರಾಮೀಣ ಸಮುದಾಯಗಳಲ್ಲಿ ಔಷಧೀಯ ಸಸ್ಯಗಳ ಮಹತ್ವವನ್ನು ಒತ್ತಿಹೇಳಿದರು. ಉದ್ಘಾಟನಾ ಸಮಾರಂಭದ ನಂತರ ಡಾ. ಎಂ. ಜೆ. ಪ್ರಭು ಅವರ ಸಂಚಾಲನೆಯಲ್ಲಿ ವಿಚಾರಗೋಷ್ಠಿ ನಡೆಯಿತು.

ಪ್ಯಾನೆಲ್‌ನಲ್ಲಿ ಡಾ. ಈರಣ್ಣ ಈಶ್ವರಪ್ಪ ಹುಗಾರ್ , ಶ್ರೀಮತಿ ಸೀಮಾ ಸುಭಾಷ್ ಮಾಳಿ, ಶ್ರೀಮತಿ ಆರತಿ ಬಿ.ವಿ., ಬೆಂಗಳೂರಿನ SDM Institute of Ayurveda and Hospitalನ ಡಾ. ಅಭಿಷೇಕ್ ಭರದ್ವಾಜ್ ಬಿ.ಯು. ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರ ಹಿತಾಸಕ್ತರು ಭಾಗವಹಿಸಿದರು.

ಚರ್ಚೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ರೈತರು ಮತ್ತು ಸಮುದಾಯ ಕಾರ್ಯಕರ್ತರಿಗೆ “ಔಷಧಿಗಳ ರಾಣಿ” ಎಂದು ಪ್ರಸಿದ್ಧಿ ಪಡೆದ ಶತಾವರಿಯ ಬೆಳೆ ವಿಧಾನಗಳು, ಅದರ ಮಹತ್ವ
ಹಾಗೂ ಆರೋಗ್ಯ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಡಾ. ಹುಗಾರ ಅವರು ಶತಾವರಿ ಕೃಷಿಯ ವಿಧಾನಗಳು ಹಾಗೂ ವೆಚ್ಚ-ಲಾಭ ಅನುಪಾತದ ಕುರಿತು ವಿವರಿಸಿದರು. ಡಾ. ಅಭಿಷೇಕ್ ಭರದ್ವಾಜ್ ಅವರು ಶತಾವರಿ ಸೇವನೆಯಲ್ಲಿ ಸರಿಯಾದ ಪ್ರಮಾಣದ ಅಗತ್ಯತೆಯನ್ನು ತಿಳಿಸಿದರು. ಶ್ರೀಮತಿ ಸೀಮಾ ಅವರು ಔಷಧೀಯ ಪ್ರಯೋಜನಗಳಿಗೆ ಮುಖ್ಯವಾಗಿ ಬೇರುಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದರು. ಶ್ರೀಮತಿ ಆರತಿ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಶತಾವರಿಯ ವಿವಿಧ ತಳಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಮಾಪನದಲ್ಲಿ ಡಾ. ಪ್ರಭು ಅವರು ಶತಾವರಿಯನ್ನು ಅಂತರ ಬೆಳೆ (Intercrop) ರೂಪದಲ್ಲಿ, ವಿಶೇಷವಾಗಿ ಬರಭೂಮಿಗಳಲ್ಲಿ ಬೆಳೆಯಲು ರೈತರಿಗೆ ಲಭ್ಯವಿರುವ ಸರ್ಕಾರದ ಅನುದಾನಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಶ್ರೀಮತಿ ಆರತಿ ಬಿ.ವಿ., ಟಿಪ್ಟೂರಿನ BAIF Livelihoods ಸಂಸ್ಥೆಯ ಉಪ ಕಾರ್ಯಕ್ರಮ ಕಾರ್ಯನಿರ್ವಾಹಕರಾದ ಡಾ. ಈರಣ್ಣ ಈಶ್ವರಪ್ಪ ಹುಗಾರ್ ಹಾಗೂ ದೊಡ್ಡಬಳ್ಳಾಪುರದ Oikos Consultants ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಶ್ರೀಮತಿ ಸೀಮಾ ಸುಭಾಷ್ ಮಾಳಿ , ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಮಧು ಮಲ್ಲೇಶಪ್ಪ ಉಪಸ್ಥಿತರಿದ್ದರು.