ಬೆಂಗಳೂರು: ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಇಂದಿನಿಂದ 3 ದಿನ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಆಗಲಿದೆ. BMRCL ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಸಹಕಾರಕ್ಕಾಗಿ ಮನವಿ ಮಾಡಿದೆ.

ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಸಂಚರಿಸುವ ಮೆಟ್ರೋ ಸೇವೆಯಲ್ಲಿ ಇಂದಿನಿಂದ ಆಗಸ್ಟ್‌ 15ರವರೆಗೆ ವ್ಯತ್ಯಯ ಆಗುತ್ತಿದೆ. ನಾಗಸಂದ್ರದಿಂದ ಮಾದವಾರವರೆಗಿನ ರೀಚ್-3 ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆ ನಡೆಸಲಾಗತ್ತಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಇಂಡಸ್ಟ್ರಿ & ನಾಗಸಂದ್ರ ಮೆಟ್ರೋ ನಡುವೆ ರೈಲು ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು ಹಸಿರು ಮಾರ್ಗದ ಕೊನೆಯ ರೈಲು ರಾತ್ರಿ 11ರ ಬದಲು 10 ಗಂಟೆವರೆಗೆ ಮಾತ್ರ ಓಡಾಡಲಿದೆ. ಆಗಸ್ಟ್ 14 ರ ಬೆಳಗ್ಗೆ ಕೂಡ ಒಂದು ಗಂಟೆ ತಡವಾಗಿ ಮೆಟ್ರೋ ಸಂಚಾರ ಶುರುವಾಗಲಿದೆ. ಬೆಳಗ್ಗೆ 5ರ ಬದಲು ಬೆಳಗ್ಗೆ 6ಗಂಟೆಗೆ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವಿನ ಮೆಟ್ರೋ ಸಂಚಾರ ಪ್ರಾರಂಭ ಆಗಲಿದೆ.

ಆಗಸ್ಟ್ 14ರಂದು ಕೊನೆಯ ರೈಲು ಒಂದು ಗಂಟೆ ಮುಂಚಿತವಾಗಿ ರಾತ್ರಿ 11ರ ಬದಲು 10 ಗಂಟೆಗೆ ಕಡೆಯ ಮೆಟ್ರೋ ಸಂಚಾರ ಮಾಡಲಿದೆ. ಆಗಸ್ಟ್ 15ರಂದು ಬೆಳಗ್ಗೆ ಒಂದು ಗಂಟೆ ತಡವಾಗಿ ಅಂದ್ರೆ ಬೆಳಗ್ಗೆ 5ರ ಬದಲು ಬೆಳಗ್ಗೆ 6ಗಂಟೆಗೆ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ.