ಕುಣಿಗಲ್: ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ‌ ಉಸಿರುಗಟ್ಟಿಸಿ ವೃದ್ಧೆಯನ್ನು ಕೊಲೆ ಮಾಡಿದ ಕಳ್ಳರು, ಚಿನ್ನದ ಸರ, ಬಳೆ, ಓಲೆ‌ ಕಿತ್ತುಕೊಂಡು ಹೋಗಿದ್ದಾರೆ.

ನಾಗಮ್ಮ (70) ಕೊಲೆಯಾದವರು. ನಾಗಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಸೋಮವಾರ ಘಟನೆ ನಡೆದಿದ್ದು, ಮಂಗಳವಾರ ರಾತ್ರಿ ಅಕ್ಕಪಕ್ಕದ ಮನೆಯವರು ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ.

ನಾಗಮ್ಮ ಮಗ ವರದರಾಜು ಮಾರ್ಚ್ 8 ರಂದು ಮನೆಗೆ ಹೋಗಿದ್ದರು. ಸೋಲಾರ್ ಮತ್ತು ಪೈಪ್ ಲೈನ್ ಕೆಲಸ ಮುಗಿಸಿ, ಅವತ್ತೇ ಬೆಂಗಳೂರಿಗೆ ತೆರಳಿದ್ದರು. ಮಾರ್ಚ್ 9 ರಂದು ಮನೆಗೆ ನುಗ್ಗಿದ ಕಳ್ಳರು ನಾಗಮ್ಮ ಅವರನ್ನು ಕೊಲೆ‌ ಮಾಡಿ, ಚಿನ್ನಾಭರಣ ಕದ್ದು, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.

ನಾಗಮ್ಮ ಎರಡು ದಿನಗಳಿಂದ ಮನೆಯಿಂದ ಹೊರಗಡೆ ಬಂದಿರಲಿಲ್ಲ. ಅಕ್ಕಪಕ್ಕದ ನಿವಾಸಿಗಳು ಇದನ್ನು ಗಮನಿಸಿ ಮನೆಯ ಬಳಿ ಹೋಗಿ ಕಿಟಕಿಯಿಂದ ನೋಡಿದಾಗ ಮೃತದೇಹ ಕಂಡು ಬಂದಿದೆ. ಕೂಡಲೇ ಕುಟುಂಬಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.