ಬೆಂಗಳೂರು: ನಗರದಲ್ಲಿ ಭೀಕರವಾಗಿ ಕೊಲೆಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಮನೆಗೆ ಸಾಲ ಕೇಳಲು ಬಂದ ಸ್ನೇಹಿತನನ್ನು ಜಾಕ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಕೆ.ವಿ.ಶ್ರೀನಾಥ್ (34) ಕೊಲೆಯಾದವನು. ಮಾಧವ ರಾವ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ ವಾಪಸ್ ಆಗಿರಲಿಲ್ಲ. ಇದರಿಂದ ಹೆದರಿದ ಶ್ರೀನಾಥ್ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ತನಿಖೆ ನಂತರ ಮಾಧವನ ಮನೆಗೆ ಹೋಗಿರುವುದಾಗಿ ಸಿಸಿಟಿವಿ ಮೂಲಕ ತಿಳಿದುಬಂದಿದೆ.ಆತನ ಮೊಬೈಲ್ ಲೋಕೇಶನ್ ಪತ್ತೆ ಮಾಡಿದ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶದಲ್ಲಿಇದ್ದಾನೆ ಎಂದು ಗೊತ್ತಾಗಿತ್ತು. ನಂತರ ಮಾಧವರಾವ್‌ನನ್ನು ಕರೆತಂದು ಪೊಲೀಸರು ವಿಚಾರಣೆಯನ್ನು ನಡೆಸಿದಾಗ ಅಸಲಿ ಕಥೆಯನ್ನು ತೆರೆದಿಟ್ಟಿದ್ದ.
ಕೆ.ವಿ.ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು.ಹೀಗಿರುವಾಗ ಮೇ 28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಶ್ರೀನಾಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು ಈ ವೇಳೆ ಸಿಟ್ಟಿನಲ್ಲಿ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್‌ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದ. ಕುಸಿದು ಬಿದ್ದ ಶ್ರೀನಾಥ್‌ನ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ ಸಾಕ್ಷಿ ನಾಶ ಮಾಡಲು ಶ್ರೀನಾಥ್‌ನ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ.
ಮೊದಲಿಗೆ ಒಂದು ಬ್ಯಾಗ್ ನಂತರ ಎರಡು ಬ್ಯಾಗ್‌ಗಳಲ್ಲಿ ಮೃತದೇಹದ ತುಂಡುಗಳನ್ನು ತುಂಬಿಕೊಂಡು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಹಾಕಿದ್ದ. ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಎಸ್ಕೇಪ್ ಆಗಿದ್ದ.
ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಕೊಲೆ (302) ಮತ್ತು ಸಾಕ್ಷಿ ನಾಶ (201)ಅಡಿ ಕೇಸ್ ದಾಖಲಿಸಿಕೊಂಡು ಪೊಲೀಸರಿಂದ ಶ್ರೀನಾಥ್ ಮೃತದೇಹದ ತುಂಡುಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಮೂರು ದಿನದಿಂದ ಪೊಲೀಸರು ಶ್ರೀನಾಥ್ ಮೃತದೇಹದ ತುಂಡಗಳಿಗಾಗಿ ಹುಡುಕಾಡ ನಡೆಸುತ್ತಿದ್ದಾರೆ. ಆದ್ರೆ ಮೃತದೇಹ ಹುಡುಕಲು ಮಂಗಳೂರಿನಿಂದ ನುರಿತರನ್ನ ಕರೆಸಿದರೂ ಸಿಕ್ಕಿಲ್ಲ. ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿವೆ ಅಂತ ಶಂಕಿಸಲಾಗಿದೆ.

