ಬೆಂಗಳೂರು: ಕೆ.ಆರ್. ಪುರದ ಎನ್ಆರ್ಐ ಲೇಔಟ್ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಝೆಪ್ಟೋ, ಸ್ವಿಗ್ಗಿ ಹಾಗೂ ಝೊಮ್ಯಾಟೊ ಸಂಸ್ಥೆಗಳ ಡೆಲಿವರಿ ಸಿಬ್ಬಂದಿಗೆ ದಿನಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದ್ದ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿವೆ.
ಸಂಜೆ ಸುಮಾರು 7 ಗಂಟೆಗೆ ವಾಹನಗಳಿದ್ದ ಆವರಣದ ಗೇಟ್ ಲಾಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಾರ್ಕಿಂಗ್ಗೆ ತಂದಿದ್ದ ಮತ್ತು ಸರ್ವೀಸ್ಗಾಗಿ ಕಾಯ್ದಿರಿಸಲಾಗಿದ್ದ ಸುಮಾರು 400ಕ್ಕೂ ಅಧಿಕ ವಾಹನಗಳು ಬೆಂಕಿಯ ಜ್ವಾಲೆಗೆ ಸಿಲುಕಿ ನಾಶವಾಗಿವೆ.
ಇವಿಸ್ ಕಂಪನಿಯ ಅಡ್ಮಿನ್ ಹರೀಶ್ ಪ್ರತಿಕ್ರಿಯಿಸಿ, ಸಂಜೆ 7 ಗಂಟೆಯ ಸುಮಾರಿಗೆ ಜಾಗದ ಮಾಲೀಕರು ಫೋನ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ವಿಚಾರ ತಿಳಿಸಿದಾಗಷ್ಟೇ ನಮಗೆ ವಿಷಯ ಗೊತ್ತಾಯಿತು. ದಿನನಿತ್ಯದ ಕೆಲಸ ಮುಗಿದ ನಂತರ ವಾಹನಗಳನ್ನು ಪಾರ್ಕ್ ಮಾಡಲು ಹಾಗೂ ಸರ್ವೀಸ್ಗೆ ಬಂದ ಗಾಡಿಗಳನ್ನು ಇಡಲು ಈ ಜಾಗವನ್ನು ಬಳಸುತ್ತಿದ್ದೆವು. ಇದುವರೆಗೆ ಈ ರೀತಿಯ ಘಟನೆ ಎಂದೂ ನಡೆದಿರಲಿಲ್ಲ. ಯಾರೋ ಬೇಕೆಂದೇ ಕಿಡಿಗೇಡಿತನದಿಂದ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ನಮಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. 2 ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

