ಬೆಂಗಳೂರು: ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿರುವುದು ಜೈಲು ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೊಬೈಲ್ ಅವರಿಗೆ ಹೇಗೆ ಲಭ್ಯವಾಯಿತು ಮತ್ತು ಯಾರು ನೀಡಿದರು ಎಂಬುದರ ಬಗ್ಗೆ ಮಧ್ಯಾಹ್ನದೊಳಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.

ಆಗಸ್ಟ್ 6ರಂದು ಜೈಲು ಅಧಿಕಾರಿಗಳು ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದ್ದ ವೇಳೆ ಪ್ರಜ್ವಲ್ ರೇವಣ್ಣ ಬಳಿ ಯಾವುದೇ ಮೊಬೈಲ್ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಸಿಸಿಬಿ ನಡೆಸಿದ ತಪಾಸಣೆಯಲ್ಲಿ ಅವರ ಬ್ಯಾರಕ್ನಿಂದ ಮೊಬೈಲ್ ಪತ್ತೆಯಾಗಿದೆ.

ದರ್ಶನ್, ಪವಿತ್ರಾಗೌಡ, ಪ್ರಜ್ವಲ್ ರೇವಣ್ಣ ಸೇರಿದಂತೆ ಜೈಲಿನಲ್ಲಿರುವ ವಿಐಪಿ ಕೈದಿಗಳ ಬ್ಯಾರಕ್ಗಳಲ್ಲಿ ಸಿಸಿಬಿ ಅಧಿಕಾರಿಗಳು ಸತತ ಆರು ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಈ ವೇಳೆ ಪ್ರಜ್ವಲ್ ರೇವಣ್ಣ ಅವರ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮೊಬೈಲ್ ಜೈಲಿನೊಳಗೆ ಹೇಗೆ ಬಂದಿತು, ಯಾರು ನೀಡಿದರು ಹಾಗೂ ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ಸೂಚಿಸಲಾಗಿದೆ.

ನಿಗದಿತ ಅವಧಿಯೊಳಗೆ ಮೊಬೈಲ್ ಕುರಿತು ಸಮರ್ಪಕ ಮಾಹಿತಿ ನೀಡದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬೇರೆ ಬ್ಯಾರಕ್ಗೆ ಸ್ಥಳಾಂತರಿಸುವುದಾಗಿ ಜೈಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಜೈಲಿನೊಳಗೆ ಕೈದಿಗಳಿಗೆ ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳು ಹೇಗೆ ತಲುಪುತ್ತಿವೆ ಎಂಬ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ.