ಬೆಂಗಳೂರು:ನರೇಗಾ ಕಾಯ್ದೆ ಪುನ:ಸ್ಥಾಪನೆ ಆಗಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಕರೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ ಎಂದರು.
ಕೆಪಿಸಿಸಿ ವತಿಯಿಂದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ನರೇಗಾ ರದ್ದು ಮಾಡಿರುವುದನ್ನು ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ ನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ರೂಪಿಸಿದೆ. ಮಹಾತ್ಮ ಗಾಂಧಿ ಹೆಸರು ಎಂದರೆ ಅವರಿಗೆ ಅಲರ್ಜಿ ಎಂದರು.

