ಬೆಂಗಳೂರು: ಪ್ರಧಾನಿ ಮೋದಿಯವರ ಸರ್ಕಾರ ರಚನೆ ಮತ್ತು ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ನೊಂದ ನೀಟ್ ಪರೀಕ್ಷಾರ್ಥಿಗಳ ಅಹವಾಲು ಆಲಿಸಲಿ. ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ನೀಟ್‌ ಫಲಿತಾಂಶದಲ್ಲಿ ಭಾರಿ ಅಕ್ರಮ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ, ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲಿ, ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರವಾಗಲೀ ಉತ್ತರಿಸದೆ ಲಕ್ಷಾಂತರ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ.

ನೀಟ್ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕಗಳು ಬಂದಿವೆ. ಅಂದರೆ 100% ಅಂಕಗಳು‌ ಬಂದಿದೆ. ಆದರೆ ಈ ಹಿಂದೆ ಬಂದ ಟಾಪರ್‍‌ಗಳ ಸಂಖ್ಯೆ ಎಷ್ಟು? ಎಂಬುದನ್ನು ಹೋಲಿಕೆ ಮಾಡಿ ನೋಡಿದರೆ ಈ ಬಾರಿಯ ಫಲಿತಾಂಶದಲ್ಲಿ ಅಕ್ರಮದ ವಾಸನೆ ಬಡಿಯುತ್ತದೆ ಎಂದು ಆರೋಪಿಸಿದ್ದಾರೆ.

2019ರಲ್ಲಿ ಒಬ್ಬ ವಿದ್ಯಾರ್ಥಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ, 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ ಅಂಕ ಪಡೆದಿದ್ದರೆ ಈ ವರ್ಷ – 67 ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

ನೀಟ್‌ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ನೂರು ಪ್ರತಿಶತ ಅಂಕ ಗಳಿಸುವುದು ಅಸಾಧ್ಯ ಎನ್ನಿಸುತ್ತದೆ. ಇದು ಕಾಕತಾಳೀಯವೋ ಅಥವಾ ಹೊಸ ಪ್ರಯೋಗವೋ? ಇದನ್ನು ಮೋದಿ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.