ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಜುಲೈ 15ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಶಾಸಕರು ಸದನದಲ್ಲಿ ಉಪಸ್ಥಿತರಿದ್ದ ಅವಧಿಯನ್ನು ತಂತ್ರಜ್ಞಾನ ಆಧರಿಸಿ ಲೆಕ್ಕ ಹಾಕಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಜುಲೈ 15ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಕಳೆದ ಅಧಿವೇಶನದಲ್ಲಿ ಕಲಾಪಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಬಹುಮಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾರು ಎಷ್ಟು ಸಮಯ ಇದ್ದಾರೆ? ಎಷ್ಟು ಬಾರಿ ಎದ್ದು ಹೋದರು? ಕಡೆಯವರೆಗೆ ಇದ್ದವರು ಯಾರು? ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತೇವೆ. ತಂತ್ರಜ್ಞಾನ ಆಧರಿಸಿ ಈ ಅವಧಿ ಯನ್ನು ಲೆಕ್ಕ ಹಾಕುತ್ತೇವೆ ಎಂದು ಹೇಳಿದರು.