ಬೆಂಗಳೂರು: ಕಾಲ್ ಸೆಂಟರ್‌ನ ನಾಲ್ವರು ಉದ್ಯೋಗಿಗಳನ್ನು ಅಪಹರಣ ಮಾಡಿದ್ದ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಡ್‌ ಕಾನ್‌ಸ್ಟೆಬಲ್ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ತನಿಖಾಧಿಕಾರಿಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್ ಚಲಪತಿ ಸೇರಿ ಎಂಟು ಮಂದಿಯನ್ನು ಬಂಧಿಸಿ, ಇನೊವಾ ಹಾಗೂ ವ್ಯಾಗನರ್ ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಉದ್ಯೋಗಿಯ ಖಾತೆಯಿಂದ ₹18.90 ಲಕ್ಷ ಹಣ ಆರೋಪಿಯೊಬ್ಬರ ಖಾತೆಗೆ ವರ್ಗಾವಣೆ ಆಗಿರುವುದು ತನಿಖೆ ವೇಳೆ ಗೊತ್ತಾಗಿದ್ದು, ಆ ಹಣವನ್ನು ಫ್ರೀಜ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.