ಚಳಿಗಾಲ, ಮಳೆಗಾಲ, ಬೇಸಿಗೆ ಕಾಲದಲ್ಲಿ ಆಗುವಂತಹ ಹವಾಮಾನ ಬದಲಾವಣೆ ಒಂದೇ ದಿನಗಳಲ್ಲಿ ಉಂಟಾಗುತ್ತಿದ್ದು, ಟೆಕ್ ಸಿಟಿಗಳಾದ ಬೆಂಗಳೂರು, ಪುಣೆ, ಹೈದರಾಬಾದ್‌ನಂತಹ ನಗರದಲ್ಲಿ ಬದುಕಲು ಅಸಾಧ್ಯ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹವಾಮಾನ ಬದಲಾವಣೆಯಿಂದ ರಕ್ತದೊತ್ತಡದಲ್ಲಿ ಬದಲಾವಣೆ ಹಾಗೂ ಮೂತ್ರಪಿಂಡ, ಹೃದಯ ಸಂಬಂಧಿತ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದ್ದು, ಪ್ರಮುಖ ನಗರದಲ್ಲಿ ಬದುಕಲು ಅತ್ಯಂತ ಸವಾಲಿನವುಗಳಾಗಿವೆ ಎಂದು ಹೇಳಿದರು.

ಇತ್ತೀಚೆಗೆ ಬೆಂಗಳೂರು ನಗರಕ್ಕೆ ಕೆಲಸ ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ವಿಪರೀತ ಜನ, ಮಾಲಿನ್ಯದ ಪ್ರಮಾಣ ಉಲ್ಬಣವಾಗಿದೆ. ಇದರಿಂದ ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ ನ ನಗರದಲ್ಲಿ ಬದುಕೋದೆ ದೊಡ್ಡ ಸವಾಲಾಗಿದೆ. ಇದನ್ನು ನ್ಯಾವಿಗೇಟ್ ಮಾಡಲು ಕಷ್ಟವಾಗಿದೆ ಎಂದು ನಾರಾಯಣ ಮೂರ್ತಿ ಹೇಳಿದರು.

ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಭಾರತ ವಿಫಲವಾದಲ್ಲಿ ಈ ಮೂರು ನಗರಗಳಲ್ಲಿ ಹಲವಾರು ಜನ ಸಾಮೂಹಿಕ ವಲಸೆ ಹೋಗುವ ಸಾಧ್ಯತೆ ಹೆಚ್ಚಿದೆ. ಭಾರತ ಎಲ್ಲವನ್ನೂ ಕೊನೆಯ ಕ್ಷಣದಲ್ಲಿ ಮಾಡಲು ಮುಂದಾಗುತ್ತದೆ, ಅದೇ ರೀತಿ ಇದನ್ನು ಕೂಡ ಮಾಡಿದರೆ 2030 ರ ವೇಳೆ ದೊಡ್ಡ ಸಮಸ್ಯೆ ಉಂಟಾಗುತ್ತದೆ.