ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಆನ್ಲೈನ್ ಆಪ್ನಲ್ಲಿ ಹಣ ಹೂಡಿ, ನಷ್ಟಕ್ಕೆ ಒಳಗಾದ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಹಾರಾಣಿ ವಿವಿಯ ಹಾಸ್ಟೆಲ್ನಲ್ಲಿ ನಡೆದಿದೆ.
ನೇಣಿಗೆ ಶರಣಾದ ವಿದ್ಯಾರ್ಥಿನಿಯನ್ನು ಪಾವನಾ (19) ಎಂದು ಗುರುತಿಸಲಾಗಿದೆ. ಆಕೆ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದಳು. ಆಕೆ ನೇಣಿಗೆ ಶರಣಾದ ರೂಮ್ ನಂಬರ್ 17ರಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಅದರಲ್ಲಿ ಆನ್ಲೈನ್ ಆಪ್ನಲ್ಲಿ 15,000 ರೂ. ಹೂಡಿಕೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿ ಗೇಮ್ನಲ್ಲಿ 15 ಸಾವಿರ ರೂ. ನಷ್ಟ ಅನುಭವಿಸಿದ್ದಾಳೆ. ಇದಕ್ಕಾಗಿ ಆಕೆ ಸ್ನೇಹಿತರ ಬಳಿ ಸಾಲಮಾಡಿದ್ದು, 10 ಸಾವಿರ ರೂ. ಹೊಂದಿಸಿದ್ದ ಯುವತಿ, ಉಳಿದ 5 ಸಾವಿರ ರೂ. ಹೊಂದಿಸಲು ಆಗದೆ ಚಿಂತೆಗೆ ಒಳಗಾಗಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

