ದೇವನಹಳ್ಳಿ: ವಿದೇಶಗಳಿಂದ ಅಕ್ರಮವಾಗಿ ನಕಲಿ ಸಿಗರೇಟ್ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಪತ್ತೆಹಚ್ಚಿ ತಂದೆ, ಮಗ ಸೇರಿ ಐವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು ₹50 ಲಕ್ಷ ಮೌಲ್ಯದ 20 ಕಾರ್ಟನ್ ನಕಲಿ ಸಿಗರೇಟ್ ವಶಪಡಿಸಿಕೊಂಡಿದ್ದಾರೆ. ಐಟಿಸಿ ಮತ್ತು ಇತರ ಪ್ರಸಿದ್ಧ ಕಂಪನಿಗಳ ಬ್ರ್ಯಾಂಡ್ ನಕಲಿ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತಿತ್ತು ಎಂದು ತನಿಖೆಯಿಂದ ಬಹಿರಂಗವಾಗಿದೆ.
ಬೆಂಗಳೂರಿನ ಅಬ್ದುಲ್ ಬಷೀದ್, ಇವರ ಪುತ್ರ ಮೊಹಮ್ಮದ್ ಆಶೀಕ್, ಮಹಮ್ಮದ್ ಅನ್ವರ್, ಮಹಮ್ಮದ್ ಅನ್ಸಾರಿ ಹಾಗೂ ಗುಲಾಮ್ ಹುಸೇನ್ ಖಾನ್ ಬಂಧಿತರು. ಅಕ್ರಮ ದಂಧೆಯನ್ನು ತಂದೆ, ಮಗನೇ ಸಂಘಟಿತವಾಗಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಬೋಡಿಯಾದಲ್ಲಿ ಕಡಿಮೆ ದರದಲ್ಲಿ ಖರೀದಿಸಿದ ನಕಲಿ ಬ್ರಾಂಡ್ನ ಸಿಗರೇಟ್ಗಳನ್ನ ಹಾಂಗ್ಕಾಂಗ್, ಕ್ವಾಲಾಂಲಪುರ ಹಾಗೂ ಸಿಂಗಪುರದಿಂದ ಅಕ್ರಮವಾಗಿ ಬೆಂಗಳೂರಿಗೆ ತರಲಾಗುತ್ತಿತ್ತು. ಆರೋಪಿಗಳು ಇಲ್ಲಿ ಹೆಚ್ಚಿನ ಬೆಲೆಗೆ ನಕಲಿ ಸಿಗರೇಟ್ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಅಕ್ರಮ ಜಾಲದ ಕುರಿತು ಖಾಸಗಿ ಸಂಸ್ಥೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ದಂಧೆಯ ಜಾಲ ಬಯಲಾಯಿತು. ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

