ರಾಮನಗರ: ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ ಬಳಿ ಲಂಚ ಕೇಳಿದರೆ ಬೆಂಗಳೂರಿನ  ನನ್ನ ವಿಳಾಸಕ್ಕೆ ಅವರ ಹೆಸರು ಸಹಿತ ಪತ್ರ ಬರೆಯಿರಿ ಎಂದು ಸಾರ್ವಜನಿಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ ಮೈದಾನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ತಾಲೂಕಿನಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯಬೇಕು. ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಬೇಕು. ನಿವೇಶನ, ಮನೆ ಹಂಚಿದ್ದೇವೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಜನರು ಆಶೀರ್ವಾದ ಮಾಡಲಿಲ್ಲ. ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ ಎಂದರು.

ಈ ಭಾಗವನ್ನು ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಜಮೀನುಗಳ ಬೆಲೆಯೂ ಹೆಚ್ಚಾಗಿದೆ. ಎರಡು, ಮೂರು ಲಕ್ಷ ಬಾಳುತ್ತಿದ್ದ ಜಮೀನುಗಳ ಬೆಲೆ ದುಪ್ಪಟ್ಟಾಗಿದೆ. ಜೊತೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರನ್ನು ಸಬಲರನ್ನಾಗಿ ಮಾಡಿದೆ ಎಂದು ತಿಳಿಸಿದರು.