ಬೆಂಗಳೂರು: ಅಮೆರಿಕ ಮತ್ತು ಥಾಯ್ಲೆಂಡ್‌ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ಗೆ ಪಾರ್ಸೆಲ್ ಮೂಲಕ ಬಂದಿದ್ದ ಭಾರಿ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಾಮಾನ್ಯ ತಿಂಡಿ ತಿನಿಸುಗಳ ‘ಸ್ನಾಕ್ಸ್ ಬಾಕ್ಸ್’ ಒಳಗಡೆ ಅತ್ಯಂತ ಚಾಣಾಕ್ಷತನದಿಂದ ಮುಚ್ಚಿಡಲಾಗಿದ್ದ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ವಿದೇಶಿ ಪೋಸ್ಟ್ ಆಫೀಸ್‌ನಲ್ಲಿದ್ದ ಕೆಲವು ಪಾರ್ಸೆಲ್‌ಗಳ ಮೇಲೆ ಅನುಮಾನ ಗೊಂಡ ಅಂಚೆ ಕಚೇರಿ ಸಿಬ್ಬಂದಿ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಿಖರವಾದ ಈ ಮಾಹಿತಿ ಆಧರಿಸಿ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಸೆಲ್ ಓಪನ್ ಮಾಡಿದಾಗ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಐಷಾರಾಮಿ ಪಾರ್ಟಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಅಂಚೆ ಮೂಲಕ ಈ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಅಂಚೆ ಇಲಾಖೆ ಮತ್ತು ಕಸ್ಟಮ್ಸ್ ಕಣ್ಣು ತಪ್ಪಿಸಿ ಇಂತಹ ಐಷಾರಾಮಿ ಡ್ರಗ್ಸ್ ತರಿಸುವ ಜಾಲ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಈ ಹಿಂದೆ ಕೂಡ ಸಿಸಿಬಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಅಂಚೆ ಕಚೇರಿಗಳ ಮೇಲೆ ಜಂಟಿ ದಾಳಿ ನಡೆಸಿ ನೆದರ್‌ಲ್ಯಾಂಡ್ಸ್, ಯುಎಸ್ ಮತ್ತು ಯುಕೆ ಮೂಲದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ವಿವಿಧ ಐಷಾರಾಮಿ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಜಪ್ತಿ ಮಾಡಿ ಪೆಡ್ಲರ್‌ಗಳನ್ನು ಬಂಧಿಸಲಾಗಿತ್ತು. ಸದ್ಯ ಈ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪಾರ್ಸೆಲ್ ಯಾರ ಹೆಸರಿಗೆ ಬುಕ್ ಆಗಿತ್ತು ಮತ್ತು ಬೆಂಗಳೂರಿನಲ್ಲಿ ಇದರ ಅಂತಿಮ ರಿಸೀವರ್ಸ್ ಯಾರು ಎಂಬ ಜಾಲದ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.