ಬೆಂಗಳೂರು: ಸುಮಾರು 23 ವರ್ಷಗಳ ಹಿಂದೆ ನಾಪತ್ತೆ ಮಹಿಳೆಯೊಬ್ಬರು ಇದೀಗ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈಕೆ ಪತ್ತೆಯಾಗಿರುವುದೇ ಒಂದು ರೋಚಕ ಕಥೆಯಾಗಿದೆ.

ಬಳ್ಳಾರಿ ಜಿಲ್ಲೆಯ (ವಿಜಯನಗರ) ಹೊಸಪೇಟೆಯ ದಣನಾಯಕನಕೆರೆಯ ಸಾಕಮ್ಮ ಪತ್ತೆಯಾದ ಮಹಿಳೆ. ಈಕೆಯನ್ನು ಅವರ ಕುಟುಂಬಕ್ಕೆ ಸೇರ್ಪಡೆಯಾಗಲು ಕಾರಣರಾದ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್. ಪಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ವಿಜಯಕುಮಾರ ಜಿ., ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಣೆ ಮಾಡಿದ ತಂಡದವರನ್ನು ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಅಭಿನಂದಿಸಿದ್ದಾರೆ.

ಬೆಂಗಳೂರು ನಗರದ, ಶಿವಾನಂದ ವೃತ್ತದ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧಿಕೃತ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಮಾತನಾಡಿ, ಕಾಣೆಯಾಗಿದ್ದ ಮಹಿಳೆ ಹಾಗೂ ಇತರರನ್ನು ಅಭಿನಂದಿಸಿ, ಸಾಕಮ್ಮ ಅವರನ್ನು ಅವರ ಕುಟುಂಬದವರ ವಶಕ್ಕೆ ಹಸ್ತಾಂತರಿಸಿದರು.

ಕಾಣೆಯಾಗಿದ್ದ 50 ವರ್ಷದ ಮಹಿಳೆ ಸಾಕಮ್ಮ ಅವರು ಹಲವು ವರ್ಷಗಳ ನಂತರ ಆಕೆಯ ಕುಟುಂಬವನ್ನು ಸುರಕ್ಷಿತವಾಗಿ ಸೇರಿರುವುದು ಸಂಭ್ರಮದ ವಿಷಯವಾಗಿದೆ. ಈ ಘಟನೆಯು ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಸಿನಿಮಾವನ್ನು ನೆನಪಿಸುತ್ತಿದೆ ಹಾಗೂ ಈ ಘಟನೆಗೆ ಕಾರಣವಾದ ಸಾಮಾಜಿಕ ಮಾಧ್ಯಮದ ಉತ್ತಮ ಬಳಕೆಯು ಶ್ಲಾಘನೀಯವಾದುದು ಎಂದರು.

ಮಹಿಳೆಯು ಸುಮಾರು 23 ವರ್ಷಗಳ ಹಿಂದೆ ತನ್ನ ಕುಟುಂಬ ತೊರೆದು ಕಾಣೆಯಾಗಿರುತ್ತಾರೆ. ನಂತರ ಸುಮಾರು ಎರಡು ವರ್ಷಗಳ ಹಿಂದೆ ತಿಳಿಂiಯದೇ ಕರ್ನಾಟಕದಿಂದ ರೈಲಿನ ಮೂಲಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ತಲುಪಿ, ಕುಟುಂಬದವನ್ನು ಸೇರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂಬ ವಿಚಾರವನ್ನು ಕರ್ನಾಟಕ ಮೂಲದವರಾದ ಉತ್ತರಾಖಂಡದ ಐ.ಪಿ.ಎಸ್. ಅಧಿಕಾರಿ ರವಿನಂದನ್ ಅವರ ಮೂಲಕ ಮಾಹಿತಿ ಪಡೆದಿದ್ದ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಜಿ. ಎಂಬುವರು ಈ ವಿಷಯವನ್ನು 2024 ರ ಡಿಸೆಂಬರ್ 19 ರಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ ಸಹಾಯ ಕೋರಿದ್ದರು. ಅದರಂತೆ ಪ್ರಧಾನ ಕಾರ್ಯದರ್ಶಿಯವರು ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಟ್ಯಾಗ್ ಮಾಡಿ ಮಹಿಳೆಯನ್ನು ಮರಳಿ ಕರ್ನಾಟಕಕ್ಕೆ ಕರೆತರುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿರುತ್ತಾರೆ ಎಂದು ತಿಳಿಸಿದರು.

ಸಾಕಮ್ಮನವರ ವಿಷಯವು ನನ್ನ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ, ಅಧಿಕಾರಿಗಳ ತಂಡವನ್ನು ವಿಮಾನದ ಮೂಲಕ ಕಳುಹಿಸಿ ಸಾಕಮ್ಮನವರನ್ನು ವಿಮಾನದಲ್ಲೇ ಸುರಕ್ಷಿತವಾಗಿ ಕರೆತರುವಂತೆ ಆದೇಶಿಸಿದೆ ಎಂದು ತಿಳಿಸಿದ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರಿಗೆ ಉತ್ತರಾಖಂಡದ ಐ.ಪಿ.ಎಸ್. ಅಧಿಕಾರಿ ರವಿನಂದನ್ ಅವರೊಂದಿಗೆ ಉತ್ತಮ ಓಡನಾಟ ಇದ್ದುರಿಂದ ಅವರನ್ನು ಸಂಪರ್ಕಿಸಿ ಈ ವಿಚಾರವನ್ನು ಮುಂದಿನ ಕ್ರಮಕ್ಕಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಹಾಯವಾಣಿಗೆ ಅನುಕೂಲವಾಗುವಂತೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಯು ಈ ಕುರಿತು ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ನಾಗೇಶ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಾಗೂ ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅವರನ್ನು ಸಂರ್ಪಕಿಸಿತು. ಎರಡು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಅವರೊಂದಿಗೆ ಸಮನ್ವಯ ಸಾಧಿಸಿ, ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ಅವರ ನಿರ್ದೇಶನದಂತೆ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದರು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧೀಕ್ಷಕ ಬಸವರಾಜ, ಬಳ್ಳಾರಿ ಜಿಲ್ಲೆಯ ಎನ್.ಪಿ.ಕೆ ಕೇಂದ್ರದ ವಾರ್ಡನ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಭಾರತಿಯವರು ಕಾರ್ಯಾಚರಣೆ ತಂಡದಲ್ಲಿ ಇದ್ದರು ಎಂದು ತಿಳಿಸಿದರು.