ಬೆಂಗಳೂರು: ಮನೆಗೆ ನುಗ್ಗಿ 20 ಲಕ್ಷ ರೂ. ನಗದು ಮತ್ತು 20 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರಿನ ಭಾರತ್ ನಗರದ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ.
ಹಾಸನ ಮೂಲದ ಮಾಯಣ್ಣಗೌಡ ಮನೆಯಲ್ಲಿ ಕಳ್ಳತನ ನಡೆದಿದೆ. ಮಾಯಣ್ಣಗೌಡ ಕಾಂಡಿಮೆಂಟ್ಸ್ ಶಾಪ್ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ಮಾಯಣ್ಣಗೌಡ ತಮ್ಮ ಪತ್ನಿಯ ಮನೆಗೆ ಹೋದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ.
ಆ ವೇಳೆ ಕಳ್ಳರು ಇವರ ಮನೆಯ ಬೀಗ ಒಡೆದು ಮನೆಯೊಳಗೆ ನುಗ್ಗಿ, ಕಬೋರ್ಡ್ನ ಲಾಕ್ ಮುರಿದು ಮನೆಯಲ್ಲಿದ್ದ 20 ಲಕ್ಷ ರೂ. ನಗದು ಹಾಗೂ 20 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.
ಮನೆ ಖರೀದಿಸುವ ಕನಸು ಕಂಡಿದ್ದ ಮಾಯಣ್ಣಗೌಡ ಜೀವಮಾನವಿಡೀ ದುಡಿದು ಸಂಪಾದಿಸಿದ ಹಣ, ಚಿನ್ನಾಭರಣ, ಜೊತೆಗೆ ಸಾಲ ಮಾಡಿ ತಂದಿದ್ದ ಹಾಗೂ ಇವರ ತಾಯಿ ಕೂಡಿಟ್ಟ ಹಣ ಎಲ್ಲವೂ ಕಳ್ಳರು ಲಪಟಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

