ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬ್ಯಾಂಕ್‌ನ ಸಹೋದ್ಯೋಗಿ ಗೆಳತಿಯರಿಬ್ಬರು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಖಾಸಗಿ ಸ್ವೀಟ್ಸ್ ಅಂಗಡಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಕಂಟನಕುಂಟೆ ನಿವಾಸಿ ಅಶ್ವಿನಿ.ಎಂ. (21), ದೇವನಹಳ್ಳಿ ತಾಲೂಕಿನ ಅರುವನಹಳ್ಳಿ ನಿವಾಸಿ ಸಹನಾ (21) ಮೃತ ದುರ್ದೈವಿಗಳು.

ಗೆಳತಿಯರಿಬ್ಬರು ಖಾಸಗಿ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಸೋಮವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುವ ವೇಳೆ ಸ್ಕೂಟರ್‌ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತ ಸಹನ.ಎಸ್ ಹೊಸಹಳ್ಳಿ ಠಾಣೆ ಎಎಸ್ಐ ಶ್ರೀನಿವಾಸ್ ಅವರ ಪುತ್ರಿಯಾಗಿದ್ದು, ಇದೇ ತಿಂಗಳ 21ರಂದು ನಡೆಯಲಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ 2026 ಮರುಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

ಅಪಘಾತದಲ್ಲಿ ಮೃತಪಟ್ಟ ಅಶ್ವಿನಿ.ಎಂ ಹಾಗೂ ಸಹನ.ಎಸ್ ಇಬ್ಬರ ಕಣ್ಣುಗಳನ್ನು ಅವರ ಕುಟುಂಬದವರು ನಾರಾಯಣ ನೇತ್ರಾಲಯದ ಡಾ.ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ನೀಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.