ಬೆಂಗಳೂರು: ಬಾಂಗ್ಲಾದೇಶದ ಹಿಂದೂಗಳ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಭಾರತ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಅವರು, ಬಾಂಗ್ಲಾದೇಶದಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಈಗ ಹಿಂದೂಗಳ ವಿರುದ್ಧ ಪ್ರಾರಂಭವಾಗಿವೆ. ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಗುರಿ ಮಾಡಲಾಗುತ್ತಿದ್ದು, ಅವರನ್ನು ಬಹಿರಂಗವಾಗಿ ಹತ್ಯೆ ಮಾಡುವುದು, ಹಿಂದೂಗಳ ಮನೆಯ ಮೇಲೆ ದಾಳಿ ಮಾಡುವುದು.
ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡುವುದು, ಹಿಂದೂಗಳ ದೇವಸ್ಥಾನಗಳು ಧ್ವಂಸಗೊಳಿಸುವುದು, ಬೆಂಕಿ ಹಚ್ಚುವುದು, ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂದೂಗಳನ್ನು ಸ್ಥಳಾಂತರಿಸುವುದು ಮುಂತಾದ ದೌರ್ಜನ್ಯಗಳು ನಡೆಯುತ್ತಿವೆ. ಇದರಿಂದಾಗಿ ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಭಯದ ವಾತಾವರಣ ಉದ್ಭವಿಸಿದೆ.
ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸೈನ್ಯದಿಂದ ಹಿಂದೂಗಳ ರಕ್ಷಣೆ ಮಾಡುವುದೆಂದು ಆಶ್ವಾಸನೆ ನೀಡಿದ್ದರೂ ಭಾರತ ಸರ್ಕಾರವು ಅವರ ಮೇಲೆ ಅವಲಂಬಿಸಿರದೇ ಹಿಂದೂ ಜನಾಂಗ ಮತ್ತು ದೇವಸ್ಥಾನ ರಕ್ಷಣೆಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

