ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಉತ್ತರ ಒಳನಾಡು, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಧ್ಯಮ ಮಳೆಯಾಗಲಿದೆ. ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆ ಇವೆ.

ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಆಗಸ್ಟ್‌ 27 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮೇಲಿನ ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.

ಮುಂದಿನ 48 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗ ಗಂಟೆಗೆ 40-50 ಕಿಮೀ ತಲುಪುವ ಸಾಧ್ಯತೆಯಿದೆ.