ಬೆಂಗಳೂರು: ಅತಿವೃಷ್ಟಿಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸರಕಾರದಿಂದಲೇ ಮಂಜೂರು ಮಾಡಲು ನಿರ್ಧರಿಸಿದ್ದು ರಸ್ತೆ, ಶಾಲಾ ಕಟ್ಟಡ, ಅಂಗನವಾಡಿಗಳ ದುರಸ್ತಿಗೆ ಸೋಮವಾರದೊಳಗೆ ಹಣ ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ವಿಪಕ್ಷಗಳ ಧರಣಿ ನಡುವೆಯೇ ಅತಿವೃಷ್ಟಿ ಕುರಿತು ಕಾಂಗ್ರೆಸ್ನ ಎ.ಎಸ್. ಬೋಪಣ್ಣ ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆಡಳಿತ ಪಕ್ಷದ ಸದಸ್ಯರು ಬೆಳಕು ಚೆಲ್ಲಿದರು. ಬಳಿಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸಂಪೂರ್ಣ ಹಾನಿಯಾದ ಮನೆಗೆ ಪರಿಹಾರ ಕೊಡುವುದಷ್ಟೇ ಅಲ್ಲದೆ ಸರಕಾರದಿಂದಲೇ ಮನೆ ಮಂಜೂರು ಮಾಡಿಕೊಡಲು ನಿರ್ಧರಿಸಿದ್ದೇವೆ ಎಂದರು.

