ಬೆಂಗಳೂರು: ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್​ನಿಂದ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ರಾಜಧಾನಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ.

ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದೆ. ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್​​​​​ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್​​ಗಳಿದ್ದು, 2ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಹಾಕಿತ್ತು. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನ ಶಿಫ್ಟ್ ಮಾಡಲಾಗಿದೆ.

ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್​​​​​ಮೆಂಟ್​ನಲ್ಲಿ 80 ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್​ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ. ಬಿನ್ನಿ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. 15 ಮನೆ ನಿವಾಸಿಗಳು ಹೊರಗೆ ಬಾರದ ಸ್ಥಿತಿಯಲ್ಲಿ ಸಿಲುಕಿದರು.

ಮಳೆಗೆ ಸರ್ಜಾಪುರ ಮುಖ್ಯರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತು ಜನ ಪರದಾಡ್ತಿದ್ದಾರೆ. ರೈಲ್ವೆ ಟ್ರ್ಯಾಕ್​ಗೆ ನೀರು ಬರುತ್ತೆ ಅಂತ ರೈಲ್ವೇ ಇಲಾಖೆ ನೀರು ಹರಿಯುವ ಜಾಗ ಮುಚ್ಚಿದ್ದು ಫಜೀತಿ ತಂದಿದೆ. ರಾಜಾಜಿನಗರದಲ್ಲೂ ಮಳೆ ಧಾರಾಕಾರವಾಗಿ ಸುರಿಯಿತ್ತು. ಮಂಜುನಾಥನಗರದಲ್ಲಿ ಹತ್ತಾರು ಬೈಕ್​ಗಳು ಮುಳುಗಡೆಯಾಗಿದ್ವು. ರಸ್ತೆ ಬದಿ ಅಂಗಡಿಗಳಿಗೂ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.